ಉಪಕ್ರಮಗಳು

ಆರೋಗ್ಯ

ಹೆಚ್ಚಿನ ತ್ಯಾಜ್ಯ ಆಯುವವರ ಬಳಿ ಉಚಿತ ಆರೋಗ್ಯ ಸೇವೆಗೆ ಅಗತ್ಯವಾದ ದಾಖಲೆಗಳು ಇರುವುದಿಲ್ಲ, ಅಥವಾ ಆಸ್ಪತ್ರೆಗಳು ಅವರ ಮನೆಗಳ ಹತ್ತಿರವಿರುವುದಿಲ್ಲ, ಅಂತೂ ತ್ಯಾಜ್ಯ ಆಯುವವರು ಸಾರ್ವಜನಿಕ ಆರೊಗ್ಯ ವ್ಯವಸ್ಥೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಧಿಕೃತವಾದ ಆಸ್ಪತ್ರೆ ವ್ಯವಸ್ಥೆಯ ರೀತಿರಿವಾಜುಗಳನ್ನು ನಿಭಾಯಿಸುವುದು ತ್ಯಾಜ್ಯ ಆಯುವವರಿಗೆ ಸಾಧ್ಯವಾಗುವುದಿಲ್ಲ, ಏಕೆಂದರೆ ಅವರು ಅನಕ್ಷರಸ್ಥರಾಗಿರುತ್ತಾರೆ, ಅಥವಾ ಅವರಿಗೆ ಸ್ವಲ್ಪವೇ ಓದು ಬರುತ್ತದೆ. ಹೀಗಾಗಿ ಹೆಚ್ಚಿನವರು ಕಾಯಿಲೆಕಸಾಲೆ ಆದಾಗ ಸೂಕ್ತ ಅರ್ಹತೆಯಿಲ್ಲದ ನಾಟಿ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯುತ್ತಾರೆ.

ಇನ್ನಷ್ಟು ಓದಿ

ಸವಾಲುಗಳು

ಪ್ರಾಥಮಿಕ ಆರೋಗ್ಯ ಕೇಂದ್ರ(ಪಿ ಎಚ್ ಸಿ)ಗಳ ಸೇವೆ ಸುಲಭವಾಗಿ ದೊರಕುವುದಿಲ್ಲ ಎನ್ನುವುದು ಮೊದಲ ಸವಾಲು. ಹೃದಯಸಂಬಂಧಿ ಕಾಯಿಲೆಗಳು ತ್ಯಾಜ್ಯ ಆಯುವವರಲ್ಲಿ ಸಾಮಾನ್ಯ, ಆದರೆ ಇಂಥ ಕಾಯಿಲೆಗಳಿಗೆ ಪಿ ಎಚ್ ಸಿಗಳಲ್ಲಿ ಚಿಕಿತ್ಸೆ ಉಚಿತವಾಗಿ ಲಭ್ಯವಿಲ್ಲ. ತ್ಯಾಜ್ಯ ಆಯುವವರ ಕುಟುಂಬಗಳ ಬಳಿ ರಾಜ್ಯ ಸರಕಾರ ನೀಡುವ ಬಿಪಿಎಲ್ ಕಾರ್ಡುಗಳು ಇರುವುದಿಲ್ಲ. ಆದ್ದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಇವರಿಗೆ ಉಚಿತ ಚಿಕಿತ್ಸೆ ಸಿಗುವುದಿಲ್ಲ.

ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆ ಸಾಮಾನ್ಯ, ಸಮುದಾಯದ ಕುಟುಂಬಗಳಿಗೆ ಮೈಕ್ರೋಪೋಷಕಾಂಶಗಳು ದೊರಕುವುದಿಲ್ಲ. ಬಡವರಿಗೆ ಆಹಾರ ಭದ್ರತೆಯನ್ನು ಒದಗಿಸುವ ಸರಕಾರಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪ್ರಯೋಜನ ಹೆಚ್ಚಿನ ತ್ಯಾಜ್ಯ ಆಯುವವರಿಗೆ ದಕ್ಕುವುದಿಲ್ಲ, ಅವರು ನಗರಕ್ಕೆ ವಲಸೆ ಬಂದಿರುತ್ತಾರೆ, ಅವರ ಊರುಗಳಲ್ಲಿ ಈ ಅನುಕೂಲ ಸಿಗುತ್ತಿದ್ದರೂ ಆ ಅವಕಾಶವನ್ನು ಇಲ್ಲಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

ನಮ್ಮ ಕಾರ್ಯವಿಧಾನ

ಹಸಿರು ದಳ ತ್ಯಾಜ್ಯ ಆಯುವವರ ಆರೋಗ್ಯಕ್ಕೆ ಇರುವ ಆಪತ್ತುಗಳನ್ನು ಕನಿಷ್ಠಗೊಳಿಸುವುದಕ್ಕಾಗಿ ಮತ್ತು ಅವರ ಆರೋಗ್ಯದ ಆತಂಕಗಳನ್ನು ಕಡಿಮೆ ಮಾಡುವುದಕ್ಕಾಗಿ ಬಹುಮುಖಿ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಹೆಚ್ಚಿನ ಆರೋಗ್ಯದ ಅಪಾಯಗಳನ್ನು ನಿವಾರಿಸಲು ನಾವು ಅವರ ಪೌಷ್ಟಿಕತೆಯ ಕುರಿತು ಗಮನಹರಿಸುತ್ತೇವೆ.

ಅವಕಾಶ

ಹಸಿರು ದಳ ತ್ಯಾಜ್ಯ ಆಯುವವರಿಗೆ ಸಾಧ್ಯವಾದಲ್ಲೆಲ್ಲ ಬಿಪಿಎಲ್ ಕಾರ್ಡುಗಳನ್ನು ದೊರಕಿಸಿಕೊಡಲು ಪ್ರಯತ್ನ ಮಾಡುತ್ತದೆ; ಜೊತೆಯಲ್ಲಿ ಪಿಎಚ್ ಸಿಗಳ ಜೊತೆ ಮಾತನಾಡಿ ಅವರ ಆರೋಗ್ಯ ವಿಸ್ತರಣಾ ಕಾರ್ಯಕರ್ತರಾದ ಆಶಾಕಾರ್ತರು ಸಮುದಾಯವನ್ನು ತಲುಪಿ ಅವರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವಂತೆ ಮಾಡುತ್ತೇವೆ.

ಹಸಿರು ದಳ ಭಾರತ ಸರಕಾರ ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್ ಎಂಬ ಕಾರ್ಯಕ್ರಮಕ್ಕಾಗಿ ಬಿಬಿಎಂಪಿ ಜೊತೆ ಕೆಲಸ ಮಾಡುತ್ತದೆ. ಈ ಕಾರ್ಯಕ್ರಮವು ತ್ಯಾಜ್ಯ ಆಯುವವರನ್ನು ದುರ್ಬಲ ಸಮುದಾಯ ಎಂದು ಗುರುತಿಸುತ್ತದೆ, ಇದರಲ್ಲಿ ಉಚಿತವಾಗಿ ವಾರ್ಷಿಕ ಆರೋಗ್ಯ ತಪಾಸಣೆ ಮಾಡಲಾಗುತ್ತದೆ, ಮತ್ತು ಉಚಿತ ತಪಾಸಣಾ ಕೇಂದ್ರಗಳ ಸೌಲಭ್ಯವನ್ನು ಕಲ್ಪಿಸುತ್ತದೆ. ಹೆಚ್ಚಿನ ತ್ಯಾಜ್ಯ ಆಯುವವರು, ಅವರಲ್ಲಿಯೂ ಮಹಿಳೆಯರು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ.

ಹಸಿರು ದಳ ಮನೆಯೊಳಗೆ ನಡೆಯುವ ದೌರ್ಜನ್ಯ ಮತ್ತು ಮಾದಕ ದ್ರವ್ಯಗಳ ಸೇವನೆಯ ಸನ್ನಿವೇಶದಲ್ಲಿ ಆಪ್ತಸಮಾಲೋಚನೆಯ ಕೇಂದ್ರವನ್ನು ತೆರೆಯುತ್ತಿದೆ ಮತ್ತು ತಮ್ಮ ಮಾದಕ ದ್ರವ್ಯ ಸೇವನೆಯ ಚಟದಿಂದ ಹೊರಬರುವ ಇಚ್ಛೆಯನ್ನು ತೋರುವ ವ್ಯಕ್ತಿಗಳಿಗಾಗಿ NIMHANS ಬೆಂಬಲದಿಂದ ನೆರವನ್ನು ಒದಗಿಸಲಾವುದು.

ಆರೋಗ್ಯ ಶಿಬಿರಗಳು

ಪಿ ಎಚ್ ಸಿ ಸೌಲಭ್ಯವಿಲ್ಲದ ಏರಿಯಾಗಳಲ್ಲಿ ನಾವು ಸೇಂಟ್ ಮಾರ್ಥಾ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಆಕ್ಸೋನೆಟ್ ಅಭಿವೃದ್ಧಿ ಪಡಿಸಿದ ಮೊಬೈಲ್ ಆಪ್ ಮೂಲಕ ನಾವು ತ್ಯಾಜ್ಯ ಆಯುವವರ ವಿವರಗಳನ್ನು ಸಂಗ್ರಹಿಸುತ್ತೇವೆ, ಮತ್ತು ಅನಹತ್ ಫೌಂಡೇಷನ್ ತ್ಯಾಜ್ಯ ಆಯುವವರ ಆರೋಗ್ಯ ದತ್ತಾಂಶ/ದಾಖಲೆಗಳನ್ನು ಇಡುತ್ತದೆ; ಇದರಿಂದ ಹೆಚ್ಚಿನ ನೆರವು ಅಗತ್ಯವಿರುವ ವ್ಯಕ್ತಿಗಳಿಗೆ ಆರೋಗ್ಯ ಸೇವೆ ನೀಡುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಈ ದತ್ತಾಂಶಗಳ ಆಧಾರದಿಂದಾಗಿ ಹಸಿರು ದಳ ಕೋವಿಡ್-19 ಸಂದರ್ಭದಲ್ಲಿ ತ್ಯಾಜ್ಯ ಆಯುವವರು ಔಷಧಿಯನ್ನು ಖರೀದಿಸಲು ಅಸಮರ್ಥರಾಗಿದ್ದ ಕಡೆ ಅವರಿಗೆ ಪ್ರಿಸ್ಕ್ರಿಪ್ಷನ್ ಔಷಧಿಗಳನ್ನು ಒದಗಿಸಲು ಸಾಧ್ಯವಾಯಿತು.

ಅನಹತ್ ಫೌಂಡೇಷನ್ನಿನ ನಿರಂತರ ಹಕ್ಕೊತ್ತಾಯ ಕಾರ್ಯದಿಂದಾಗಿ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ನಮ್ಮೆಲ್ಲ ಶಿಬಿರಗಳಲ್ಲಿ ಹಾಜರಿರುತ್ತಾರೆ, ವಿಶಿಷ್ಟವಾಗಿ ಟಿಬಿ ರೋಗಿಗಳ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಪೌಷ್ಠಿಕಾಂಶ ಕಾರ್ಯಕ್ರಮ

ಹಸಿರು ದಳ, 3,000ಕ್ಕೂ ವ್ಯಕ್ತಿಗಳಿಗೆ ಡಾಕ್ಟರರು ಮತ್ತು ನರ್ಸುಗಳ ಒಂದೇ ತಂಡದ ಮೂಲಕ ಕೆಲವು ವರ್ಷಗಳ ಕಾಲ ಆರೋಗ್ಯ ಸೇವೆಯನ್ನು ಒದಗಿಸಿದ ಅನುಭವದಿಂದಾಗಿ ತ್ಯಾಜ್ಯ ಆಯುವವರಲ್ಲಿ ಪೋಷಕಾಂಶಗಳ, ಅದರಲ್ಲೂ ಮುಖ್ಯವಾಗಿ ಮೈಕ್ರೋಪೋಷಕಾಂಶಗಳ ಕೊರತೆ ಇರುವುದು ಕಂಡುಬಂದಿದೆ. ಸಮುದಾಯದೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಮಾತ್ರ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ.

ಹಸಿರು ದಳ, ಸಾಧ್ಯವಾದಷ್ಟು ಮಟ್ಟಿಗೆ ತ್ಯಾಜ್ಯ ಆಯುವವರನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯೊಂದಿಗೆ ಜೋಡಿಸುವ ಪ್ರಯತ್ನವನ್ನು ಮಾಡುತ್ತಿದೆ; ಇದರಿಂದಾಗಿ ಸರಕಾರದಿಂದ ಕೊನೆ ಪಕ್ಷ ಮುಖ್ಯ ಧಾನ್ಯಗಳಾದರೂ ಸಿಗುವಂತಾಗುತ್ತದೆ.

ಹಸಿರು ದಳ, ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ, ತ್ಯಾಜ್ಯ ಆಯುವವರಿಗೆ ತುಂಬ ಪ್ರೋಟಿನ್-ಯುಕ್ತ ಆಯ್ಸ್ಟರ್ ಮಷ್ರೂಮ್ -ಗಳನ್ನು ಬೆಳೆಯುವುದರ ಕುರಿತು ತರಬೇತಿಯನ್ನು ಕೊಡಿಸುತ್ತಿದೆ. ಈಗ ತ್ಯಾಜ್ಯ ಆಯುವವರು ಬೇರೆ ಬೇರೆ ನಗರಗಳಿಗೆ ಮತ್ತು ಏರಿಯಾಗಳಿಗೆ ಹೋಗಿ ಈ ಮಷ್ರೂಮುಗಳನ್ನು ಬೆಳೆಯುವ ಮತ್ತು ಸೇವಿಸುವ ಕುರಿತು ಇತರ ತ್ಯಾಜ್ಯ ಆಯುವವರಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಗಳಿಸಿಕೊಂಡಿದ್ದಾರೆ.

Kannada