ನಮ್ಮ ಬಗ್ಗೆ

ನಮ್ಮ ಕಥೆ

Bengaluru Team Photo

ನಾವು ಬೆಂಗಳೂರಿನ ತ್ಯಾಜ್ಯ ಆಯುವವರೊಂದಿಗೆ ಕೆಲಸ ಮಾಡಲು ತೊಡಗಿ 10 ದೀರ್ಘ ವರ್ಷಗಳು ಕಳೆದಿವೆ. ಇದು ಬರೀ ಹತ್ತು ತಿಂಗಳುಗಳೇನೋ ಎನ್ನುವ ಭಾವನೆ ನಮ್ಮದು. ಸಮುದಾಯದಲ್ಲಿ ಬದಲಾವಣೆಯನ್ನು ತರುವಲ್ಲಿ ನಾವು ಬಹಳ ಶ್ರಮವಹಿಸಿ ಕೆಲಸ ಮಾಡಿದ್ದೇವೆ-ಆದರೆ ಹಲವಾರು ಬೇರೆ ಬೇರೆ ಬಾಧ್ಯಸ್ಥರಿಂದ ಹಲವು ರೀತಿಯ ಬೆಂಬಲ ಸಿಕ್ಕಿದ್ದರಿಂದ ನಮಗೆ ಈ ಹೋರಾಟಗಳು ಯಾವಾಗಲೂ ಕಷ್ಟಕರವಾಗಿರಲಿಲ್ಲ. ಹಸಿರು ದಳದ ಪಯಣ ಎಂದರೆ ಸಾಗರದ ಅಲೆಗಳ ಸವಾರಿಯಂತೆ. ಕೆಲವೊಮ್ಮೆ ಮೇಲೆ, ಕೆಲವೊಮ್ಮೆ ಕೆಳಗೆ.

ಭುಗಿಲೇಳುತ್ತಿದ್ದ ಬೆಂಕಿಯ ವಿರುದ್ಧ ನಾವು ಮೂಲಭೂತವಾಗಿ ಹೋರಾಡಿದ್ದೇವೆ; ಈ ಕಾರ್ಯತಂತ್ರ ಮೂಲಕವೇ ನಮ್ಮ ಹೊಂದಾಣಿಕೆಯ ವಿಧಾನವು ವಿಕಾಸಗೊಂಡಿದೆ-ಬದಲಾಗುತ್ತಿದ್ದ ಕಾನೂನು, ಸಾಮಾಜಿಕ ಮತ್ತು ರಾಜಕೀಯ ಪರಿಸರಗಳಿಗೆ ನಾವು ಬೆಳೆಯುತ್ತಿರುವ ಕುಶಾಗ್ರತೆ ಮತ್ತು ಆತ್ಮವಿಶ್ವಾಸದ ಜವಾಬುಗಳೊಂದಿಗೆ ಪ್ರತಿಕ್ರಿಯಿಸಿದ್ದೇವೆ, ಕಷ್ಟಗಳನ್ನು ಸಹಿಸಿಕೊಳ್ಳುವ ಗುಣವನ್ನು ನಾವು “ಬೆಂಬಲಿಸುತ್ತಿರುವ” ಸಮುದಾಯದಿಂದ ಕಲಿತಿದ್ದೇವೆ-ನಾವು ಯಾರೊಂದಿಗೆ ಕೆಲಸ ಮಾಡುತ್ತಿದ್ದೇವೆಯೋ ಆ ತ್ಯಾಜ್ಯ ಆಯುವವರು ಅತ್ಯಂತ ಕಷ್ಟ ಸಹಿಷ್ಣುಗಳು ಮತ್ತು ದಣಿವರಿಯದೇ ದುಡಿಯುವವರು. ಅವರ ಉತ್ಸಾಹ, ಹುಮ್ಮಸ್ಸು, ತಿರುಗಿ ನಮಗೇ ಅವರು ನೀಡಿದ ಬೆಂಬಲಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿದ್ದೇವೆ.

ನಮ್ಮ ಹತ್ತು ವರ್ಷಗಳ ವಾರ್ಷಿಕೋತ್ಸವಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಿರ್ಧಾರವು ಒಂದು ಉಡುಗೊರೆಯಾಗಿ ಬಂದಿದೆ ಎನ್ನಬಹುದು: ಅವರು ಇಡೀ ನಗರದ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ತ್ಯಾಜ್ಯ ಆಯುವವರಿಗೆ ಮತ್ತು ಮಹಿಳೆಯರ ಸ್ವಸಹಾಯ ಸಮೂಹಗಳಿಗೆ ಒಪ್ಪಿಸುವವರಿದ್ದಾರೆ. ಇದು, ಮನೆಮನೆಯಿಂದ ತ್ಯಾಜ್ಯವನ್ನು ಸಂಗ್ರಹಿಸುವುದರಿಂದ ಹಿಡಿದು ಅದನ್ನು ಸಂಸ್ಕರಿಸುವ ವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ.

ಆರಂಭ

In 2010, Anslem Rosario and Nalini Shekar decided to form a group to organize waste pickers city-wide in Bengaluru and provide a platform for them to be recognised for their economic contribution and as environmentalists. Today we know that waste pickers’ work is carbon negative [1].

ಹಸಿರು ದಳ ಎಂದರೆ ಹಸಿರು ಬಲ. ಸಾವಯವವಾಗಿ ರಚನೆಯಾಗಿದ್ದು, ಎಂದರೆ ಸಂಸ್ಥೆಯ ಹೆಸರನ್ನೂ ತ್ಯಾಜ್ಯ ಆಯುವವರೇ ಆರಿಸಿದ್ದು. ನಾವು ಈ ಗುಂಪನ್ನು ರಚಿಸಿದ್ದರಲ್ಲಿ ನಮ್ಮ ಮುಖ್ಯ ಉದ್ದೇಶವಿದ್ದದ್ದು ಸಮುದಾಯಕ್ಕೆ ಘನತೆ ಸಹಿತವಾಗಿ ಜೀವನೋಪಾಯಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಗರವು ಬೆಳೆಯುತ್ತಿರುವ ಹಾಗೆ, ಅಭಿವೃದ್ಧಿ ಹೊಂದುತ್ತಿರುವ ಹಾಗೆ ಅವರಿಗೆ ತ್ಯಾಜ್ಯವು ಲಭಿಸುತ್ತಿರುವ ಹಾಗೆ ನೋಡಿಕೊಳ್ಳುವುದು. ನಮ್ಮ ಪ್ರಕಾರ, ತ್ಯಾಜ್ಯ ಅಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಕಾರ್ಯಕರ್ತರನ್ನು ನಗರದ ಅಧಿಕೃತ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯೊಂದಿಗೆ ಏಕೀಕರಿಸುವುದು ಬಹಳ ಮುಖ್ಯವಾಗಿತ್ತು.

2011ರಲ್ಲಿ ಅಲಯನ್ಸ್ ಆಫ್ ಇಂಡಿಯನ್ ವೇಸ್ಟ್ ಪಿಕರ್ಸ್ ಸಂಸ್ಥೆಯೂ ಸೇರಿದಂತೆ ಸಂಬಂಧಿತ ಗುಂಪುಗಳು ಲೋಕ ಅದಾಲತ್ತಿನಲ್ಲಿ (ಕರ್ನಾಟಕ ಉಚ್ಚ ನ್ಯಾಯಾಲಯದ ಒಳಗಡೆಯೇ ಇರುವ ಸಾರ್ವಜನಿಕ ನಾಗರಿಕ ಫೋರಮ್) ತ್ಯಾಜ್ಯ ಆಯುವವರ ಕೊಡುಗೆಯನ್ನು ಮತ್ತು ಮತ್ತು ಅವರ ಔದ್ಯೋಗಿಕ ಹಕ್ಕುಗಳನ್ನು ಗುರುತಿಸುವಂತೆ ಮನವಿ ಮಾಡಿದೆವು.

2011ರಲ್ಲಿ ಲೋಕ್ ಅದಾಲತ್ ನೀಡಿದ ನಿರ್ದೇಶನದ ಮೇರೆಗೆ, ಬಿಬಿಎಂಪಿ, ತ್ಯಾಜ್ಯ ಆಯುವವರನ್ನು ನೋಂದಾವಣಿ ಮಾಡಿಕೊಳ್ಳುವ ಮತ್ತು ಸ್ಕ್ರ್ಯಾಪ್ ಡೀಲರುಗಳ ಪಟ್ಟಿ ಮಾಡುವ ಕಾರ್ಯವನ್ನು ಆರಂಭಿಸಿತು. ಈ ರೀತಿಯಾಗಿ ಬೆಂಗಳೂರು, ಭಾರತದಲ್ಲಿಯೇ ತ್ಯಾಜ್ಯ ಆಯುವವರಿಗೆ ಮತ್ತು ಅನೌಪಚಾರಿಕ ತ್ಯಾಜ್ಯ ಕಾರ್ಯಕರ್ತರಿಗೆ ಪ್ರತಿ ಕಾರ್ಡಿನ ಮೇಲೆ ಕಮಿಷನರ್ ಅವರ ಸಹಿ ಸಹಿತವಾಗಿ ಔದ್ಯೋಗಿಕ ಗುರುತು ಕಾರ್ಡುಗಳನ್ನು ನೀಡಲಾದ ಮೊಟ್ಟಮೊದಲ ನಗರವಾಯಿತು. ಹಸಿರು ದಳದ ತೀವ್ರವಾದ ಹೋರಾಟ ಫಲ ಕೊಟ್ಟಿತು ಮತ್ತು ತ್ಯಾಜ್ಯ ಆಯುವವರು ಅದರ ನಂತರ ಮುಖವಿಲ್ಲದ, ಹೆಸರಿಲ್ಲದ, ಅನಾಮಧೇಯ ಕಾರ್ಮಿಕರಾಗಿ ಉಳಿಯಲಿಲ್ಲ- ಅವರು ನಗರದ ನ್ಯಾಯಯುತ ಕಾರ್ಮಿಕರಾದರು.

ನಿಶ್ಚಿತ ಆದಾಯ ಮತ್ತು ಸಾಮಾಜಿಕ ಭದ್ರತೆ ಇವು ಒಂದೇ ನಾಣ್ಯದ ಎರಡು ಬದಿಗಳಿದ್ದ ಹಾಗೆ, ಜೀವನ ವೇತನದ ಕಡೆಗೆ ಮೊದಲ ಹೆಜ್ಜೆಯಾಗಿದ್ದವು.

ಜೀವನ ವೇತನ ಇಲ್ಲದಿರುವುದರಿಂದ ತ್ಯಾಜ್ಯ ಆಯುವವರು ತಮ್ಮ ಕುಟುಂಬದ ವೆಚ್ಚಗಳು, ಮಕ್ಕಳ ಶಿಕ್ಷಣಕ್ಕಾಗಿ ಏರುತ್ತಿರುವ ವೆಚ್ಚಗಳು ಅಥವಾ ಏರುತ್ತಿರುವ ಆಹಾರಪದಾರ್ಥಗಳ ಬೆಲೆಗಳು ಬಹುದೊಡ್ಡ ಸವಾಲಾಗಿದ್ದವು. ಸಾಮಾಜಿಕ ಭದ್ರತೆಯ ಸೌಕರ್ಯಗಳು ಜೀವನ ವೇತನದ ಕೊರತೆಯನ್ನು ಕಡಿಮೆ ಮಾಡಬಲ್ಲವು; ಜೀವನೋಪಾಯವು ಸ್ಥಿರವಾಗಿದ್ದರೆ ಅದು ಅವರ ಗಳಿಕೆಯನ್ನು ಹೆಚ್ಚಿಸುತ್ತದೆ ಮತ್ತು ನಿಯತಗೊಳಿಸುತ್ತದೆ.

ತ್ಯಾಜ್ಯ ಆಯುವವರಿಗೆ ನಗರ, ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಸಾಮಾಜಿಕ ಹಕ್ಕುಗಳ ಪ್ರಯೋಜನವನ್ನು ಪಡೆಯುವುದು ನಮ್ಮ ಸಂಸ್ಥೆಯ ಆರಂಭದ ದಿನಗಳಿಂದಲೇ ನಮ್ಮ ಪರಮಗುರಿಯಾಗಿತ್ತು, ಈಗಲೂ ಅದು ಮುಂದುವರೆದಿದೆ. ಸಾಮಾಜಿಕ ಭದ್ರತೆಯ ಕುರಿತಾದ ಕಾರ್ಯನೀತಿಯಲ್ಲಿ ಅಗತ್ಯವಾದ ಬದಲಾವಣೆಯನ್ನು ನಿರಂತರವಾಗಿ ತರುವ ಸಲುವಾಗಿ ನಾವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇತರ ಗುಂಪುಗಳೊಂದಿಗೆ ಕೆಲಸ ಮಾಡುತ್ತೇವೆ.

ಕಾನೂನು ಅವಕಾಶಗಳಿಂದಾಗಿ ಕೆಲವು ತ್ಯಾಜ್ಯ ಆಯುವವರಿಗೆ ನಿರೀಕ್ಷಿಸಬಹುದಾದ ಆದಾಯವನ್ನು ತರುವಲ್ಲಿ ಮತ್ತು ಅವರ ಕೌಶಲಗಳನ್ನು ವೃದ್ಧಿಸುವಲ್ಲಿ ಸಾಧ್ಯವಾಯಿತು. ಆದರೆ ಇತರ ತ್ಯಾಜ್ಯ ಅಯುವವರು ಆ ನಿಬಂಧನೆಗಳಿಗೆ ಅರ್ಹರಾಗಿರಲಿಲ್ಲ. ನಾವೂ ಈಗಲೂ ಕಾನೂನಿನ ಅಡಿಯಲ್ಲಿಯೇ ಅವರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರಿಗೆ ಸಾಮಾಜಿಕ ಭದ್ರತೆಯ ಹಕ್ಕುಗಳು ಸಿಗುವ ಹಾಗೆ ಮಾಡುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ, ಅವರ ಮಕ್ಕಳಿಗೆ ಶಿಕ್ಷಣದಲ್ಲಿ ಮತ್ತು ಅದರ ನಂತರ ಉದ್ಯೋಗಗಳಲ್ಲಿ ವಿವಿಧ ಆಯ್ಕೆಗಳು ದೊರಕುವಂತೆಯೂ ನಾವು ಕೆಲಸ ಮಾಡುತ್ತಿದ್ದೇವೆ.

ಬೆಳವಣಿಗೆ

Through 2012 and 2013, Hasiru Dala kept its focus on identity rights enumeration and organisation of waste pickers and informal sector waste workers. In 2013, Hasiru Dala was incorporated as a Charitable Trust in Bengaluru. Along with Jain University and the Solid Waste Management Round Table (SWMRT), we decided to look at the contribution of the waste pickers of the city. The findings were presented in a paper, “Informal Waste Workers Contribution in Bengaluru” at Icon SWM in 2014.

ತ್ಯಾಜ್ಯ ಆಯುವ ಒಬ್ಬ ವ್ಯಕ್ತಿಯು 8ರಿಂದ 10 ಗಂಟೆಗಳ ಒಂದು ದಿನದಲ್ಲಿ ಸರಾಸರಿ 60ರಿಂದ 90 ಕಿಲೋಗ್ರಾಮ್ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಹಸಿರು ದಳದಲ್ಲಿ ನೋಂದಾವಣಿ ಮಾಡಿಕೊಂಡಿದ್ದ 4,175 ತ್ಯಾಜ್ಯ ಆಯುವವರು ಅಕಸ್ಮಾತ್ ತಮ್ಮ ಕೆಲಸವನ್ನು ನಿಲ್ಲಿಸಿದರೆ ಬಿಬಿಎಂಪಿಯು ತನ್ನ ಈಗಿರುವ 450 ಕೋಟಿ ಬಜೆಟನ್ನು ಇನ್ನೂ 23 ಲಕ್ಷದಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ನಮ್ಮ ಅಧ್ಯಯನಗಳಿಂದ ಕಂಡುಬಂದಿತು. ಇದೇ ಅಂಕಿಅಂಶಗಳನ್ನು ಬೆಂಗಳೂರು ನಗರದಲ್ಲಿರುವ 15,000 ತ್ಯಾಜ್ಯ ಆಯುವವರ ಸಂಖ್ಯೆಗೆ ಅನ್ವಯಿಸುವುದಾದರೆ ಬಿಬಿಎಂಪಿಗೆ ಅವರ ಸೇವೆಯಿಂದ ವರ್ಷಕ್ಕೆ 84 ಕೋಟಿ ಉಳಿತಾಯವಾಗುತ್ತದೆ ಎಂಬುದು ಬಯಲಾಯಿತು.

ಒಣ ತ್ಯಾಜ್ಯ ಸಂಗ್ರಹಣ ಕೇಂದ್ರ-“ಕರ್ತವ್ಯ”ದ ಸ್ಥಾಪನೆ, ಎಂದರೆ, ಮುನಿಸಿಪಲ್ ಕಾರ್ಪೋರೇಷನ್ ಸ್ಥಾಪಿಸಿದ ವಾರ್ಡ್ ಮಟ್ಟದಲ್ಲಿ ಒಣ ಕಸವನ್ನು ಒಂದೆಡೆ ಒಟ್ಟು ಗೂಡಿಸುವ ಕೇಂದ್ರವನ್ನು ತ್ಯಾಜ್ಯ ಆಯುವವರು ಮತ್ತು ಸ್ಕ್ರ್ಯಾಪ್ ಡೀಲರುಗಳೇ ನಡೆಸಿಕೊಂಡುಹೋಗುವಂತಾಗಿದ್ದು ತ್ಯಾಜ್ಯ ನಿರ್ವಹಣೆಯಲ್ಲಿ ಇನ್ನೊಂದು ಐಹಿಹಾಸಿಕ ಕ್ಷಣ ತೆರೆದುಕೊಂಡಿತು, ಸ್ವಚ್ಛಗೊಳಿಸುವ ಮತ್ತು ಅದರಿಂದಾಗಿ ಆರೋಗ್ಯದ ಆಪತ್ತುಗಳಿಗೆ ಒಳಗಾಗುವ ಉದ್ಯೋಗಗಳಲ್ಲಿ ತೊಡಗಿರುವವರ ಮಕ್ಕಳಿಗಾಗಿ ಇರುವ ಸರಕಾರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಗಳ ಸೌಲಭ್ಯವನ್ನು ತ್ಯಾಜ್ಯ ಆಯುವವರ ಮಕ್ಕಳಿಗೂ ಸಿಗುವ ಹಾಗೆ ಯೋಜನೆಯನ್ನು ವಿಸ್ತರಿಸುವಂತೆ ಹಸಿರು ದಳ ಹಕ್ಕೊತ್ತಾಯ ಮಾಡಿತು. ತ್ಯಾಜ್ಯ ಆಯುವವರನ್ನು ಮೊದಲು ಈ ವರ್ಗದಲ್ಲಿ ಸೇರಿಸಿರಲಿಲ್ಲ.

2014ರ ಮಧ್ಯಭಾಗದಿಂದ ಸೆಪ್ಟೆಂಬರ್ 2015ರ ವರೆಗೆ ತ್ಯಾಜ್ಯ ಆಯುವವರ ಕುರಿತು ಮಾಡಿದ ಅಧ್ಯಯನದ ನಂತರ, ಒಣ ಕಸ ಸಂಗ್ರಹಣ ಕೇಂದ್ರದಲ್ಲಿ ಒಳಬರುತ್ತಿರುವ ತ್ಯಾಜ್ಯದ ಪ್ರಮಾಣ ಮತ್ತು ಅದರಿಂದಾಗಿ ಮುನಿಸಿಪಾಲಿಟಿಗೆ ಆಗುತ್ತಿರುವ ಉಳಿತಾಯದ ದೃಷ್ಟಿಯಿಂದ, ಈ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಅನೌಪಚಾರಿಕ ವಲಯದ ಕಾರ್ಯಕರ್ತರ ಕೊಡುಗೆಯೇನು ಎನ್ನುವುದರ ಕುರಿತು ಕೂಡ ಒಂದು ಅಧ್ಯಯನವನ್ನು DWCC ನಡೆಸಿತು. ತ್ಯಾಜ್ಯದ ಮಾರ್ಗಾಂತರದ ಕುರಿತು ಮೂವತ್ತೆರಡು DWCCಗಳಿಂದ ಸಂಗ್ರಹಿಸಿದ ಆರು ತಿಂಗಳ (2015ರ ಜನವರಿಯಿಂದ ಜುಲೈವರೆಗೆ) ದತ್ತಾಂಶಗಳಿಂದ ತಿಳಿದುಬಂದ ಅಂಶವೆಂದರೆ, ತ್ಯಾಜ್ಯವನ್ನು ಉಪಯುಕ್ತವಾದ ಪರ್ಯಾಯ ಮಾರ್ಗದಲ್ಲಿ ಸೇರಿಸುವ ಕುರಿತು ಈ ಕೇಂದ್ರಗಳು ಅಸಾಧಾರಣ ಪ್ರಗತಿಯನ್ನು ಸಾಧಿಸಿವೆ ಎಂಬುದು; ವರ್ಷದಲ್ಲಿ 23,73,908.8 ಕಿಲೋಗ್ರಾಮಿನಷ್ಟು ಒಣತ್ಯಾಜ್ಯವನ್ನು ಹಿಂದಕ್ಕೆ ಸಂಪಾದಿಸಿ, ರೂ.48.79 ಲಕ್ಷದಷ್ಟು ಹಣವನ್ನು ಉಳಿತಾಯ ಮಾಡಿವೆ.

ನಾವು ಏನನ್ನು ಕಲಿಯುವುದಕ್ಕೆ ಮತ್ತು ಅನುಷ್ಠಾನ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದೆವು ಎಂದರೆ, ಪರಿಸರ ವ್ಯವಸ್ಥೆಯ ಸ್ಥಿರತೆಯು ನಿರೀಕ್ಷಿಸಬಹುದಾದ ಆದಾಯಗಳ ರೂಪದಲ್ಲಿ ಫಲಿಸುತ್ತವೆ ಎಂಬುದು: ಸಮಾನವಾದ ಅವಕಾಶವನ್ನು ಕಲ್ಪಿಸುವಂಥ ಪರಿಸರವ್ಯವಸ್ಥೆಯನ್ನು ಸೃಷ್ಟಿಸುವುದು ಬದಲಾವಣೆಯ ಮೂಲಮಂತ್ರವಾಗಿತ್ತು, ತ್ಯಾಜ್ಯ ಆಯುವವರ ಕೆಲಸಕ್ಕೆ ಒಂದು ಔದ್ಯಮಿಕತೆಯ ಸ್ಥಾನವನ್ನು ತರುವುದು ಮತ್ತು ಹೆಚ್ಚು ಉತ್ತಮವಾದ ಬದುಕುಗಳನ್ನು ಕಟ್ಟುವುದು. ನಮ್ಮ ಅನುಭವದ ಪ್ರಕಾರ ಒಮ್ಮೆ ಅವಕಾಶವನ್ನು ಸೃಷ್ಟಿಸಿದರೆ, ತ್ಯಾಜ್ಯ ಆಯುವವರ ಜೀವನ ಮಟ್ಟಗಳಲ್ಲಿ ಎದ್ದು ಕಾಣುವ ಸುಧಾರಣೆಯಾಗುತ್ತದೆ. ಸಮಾನವಾದ ಅವಕಾಶವನ್ನು ಸ್ಥಾಪಿಸುವುದು ಸ್ಥಿರತೆಯನ್ನು ತರುತ್ತದೆ.

2015ರಲ್ಲಿ, ಬುಗುರಿ ಮಕ್ಕಳ ಕಾರ್ಯಕ್ರಮವು ಒಂದು ಬೇಸಿಗೆ ಶಾಲೆಯನ್ನು ನಡೆಸಿತು. ಶಾಲೆಯಿಂದ ಒಂದು ಮಗುವೂ ಹೊರಗುಳಿಯಬಾರದು ಎಂಬ ಆಂದೋಲನಕ್ಕೆ ಬೆಂಬಲ ನೀಡುವುದು ಇದರ ಉದ್ದೇಶವಾಗಿತ್ತು. ಮಕ್ಕಳ ಪುಸ್ತಕಗಳನ್ನು ಬರೆಯುವ ಲೇಖಕರೇ ಸ್ವತಃ ಮಕ್ಕಳಿಗೆ ಪುಸ್ತಕ ಓದುವುದನ್ನು ಹೇಳಿಕೊಟ್ಟರು. ಇದಾದಾಗಲೇ ಮಕ್ಕಳಿಗೆ ತಮ್ಮ ಬಡಾವಣೆಯಲ್ಲಿ ಒಂದು ಓದುಗರ ಕ್ಲಬ್ಬನ್ನು ಪ್ರಾರಂಭಿಸಬೇಕು ಎಂಬ ಆಲೋಚನೆ ಬಂದಿದ್ದು. ಇದರಿಂದಾಗಿ, ದೊಡ್ಡವರ ಜೀವನೋಪಾಯದ ಬಗ್ಗೆ ಮಾತ್ರ ನಾವು ಕೆಲಸ ಮಾಡಿದರೆ ಸಾಲದು, ಅವರ ಮಕ್ಕಳ ಶೈಕ್ಷಣಿಕ ಅವಕಾಶಗಳಿಗೂ ಬುನಾದಿ ಹಾಕಬೇಕು ಎಂಬುದು ನಮಗೆ ಮನವರಿಕೆ ಆಗತೊಡಗಿತು. ಶಿಕ್ಷಣ ಕಡ್ಡಾಯ ಎಂದು ಕಾಯ್ದೆ ಇದೆ, ಆದರೆ ಪ್ರತ್ಯೇಕ ಮಗುವಿನ ಸಂದರ್ಭದಲ್ಲಿ ಮಗು ಶಾಲೆಗೆ ಸೇರಲು ಅತ್ಯಗತ್ಯವಾದ ಸೌಕರ್ಯ ಇಲ್ಲವಾಗಿತ್ತು ಹೀಗಾಗಿ ಸಮಾನ ಶಿಕ್ಷಣವನ್ನು ಪಡೆಯುವುದು ತ್ಯಾಜ್ಯ ಆಯುವವರ ಮಕ್ಕಳ ಕೈಗೆಟುಕದ ಕನಸಾಗಿತ್ತು. ಸ್ವ-ಬೆಳವಣಿಗೆಗಾಗಿ ಸೃಜನಶೀಲ ಪ್ರೇರಣೆ ನೀಡುವ ಔಪಚಾರಿಕ ಶಿಕ್ಷಣ ಮಕ್ಕಳ ಭವಿಷ್ಯದ ಭದ್ರ ಬುನಾದಿಯ ಮೆಟ್ಟಲಾಗಿದೆ. ಓದುವ ಕೌಶಲ ಮತ್ತು ಜೀವನ ಕೌಶಲದ ಕಡೆಗೆ ಗಮನ ಹರಿಸುವ ನಮ್ಮ ಸಮುದಾಯ ಗ್ರಂಥಾಲಯವು ಮಕ್ಕಳ ಶೈಕ್ಷಣಿಕ ಕೌಶಲ ಅಭಿವೃದ್ಧಿಗೆ ಅತ್ಯಂತ ಪ್ರೇರಕವಾಗಿದೆ.

ತ್ಯಾಜ್ಯ ಆಯುವವರು ಮುಂಚೂಣಿಯಲ್ಲಿ

2015ರಲ್ಲಿ, ಮೊದಲು ತ್ಯಾಜ್ಯ ಆಯುವವರಾಗಿದ್ದು ಈಗ ಒಣ ತ್ಯಾಜ್ಯ ಸಂಗ್ರಹಣ ಕೇಂದ್ರ ಕಾರ್ಯಚಾಲಕರಾದ ಮನ್ಸೂರ್ ಗೌಸ್, ಅಲಯನ್ಸ್ ಅಫ಼್ ಇಂಡಿಯನ್ ವೇಸ್ಟ್-ಪಿಕರ್ಸ್ (ಎಐಡಬ್ಲ್ಹು)ನ ಕಬೀರ್ ಅರೋರಾಅವರೊಂದಿಗೆ ನವೆಂಬರ್ 29ರಂದು ಫ಼್ರಾನ್ಸಿಗೆ ಹೋದರು. ಅಲ್ಲಿ, ಪ್ಯಾರಿಸಿನಲ್ಲಿ ನಡೆದ COP21ಎಂಬ ವಾಯುಗುಣ ಬದಲಾವಣೆ ಕುರಿತಾದ ಸಮ್ಮೇಳನದಲ್ಲಿ ಭಾಗವಹಿಸಿದರು. ಮನ್ಸೂರರ ಹಾಗೆಯೇ ದಕ್ಷಿಣ ಅಮೆರಿಕ, ಯುಎಸ್ಎ, ಚೀನಾ, ಆಫ್ರಿಕಾ, ಬಾಂಗ್ಲಾದೇಶ್ ಮತ್ತು ಯುರೋಪೂ ಸೇರಿದ ಹಾಗೆ ಜಗತ್ತಿನ ವಿವಿಧ ಭಾಗಗಳಿಂದ ಬಂದ ತ್ಯಾಜ್ಯ ಆಯುವವರು ಅಲ್ಲಿ ಸೇರಿದ್ದರು. ಮನ್ಸೂರ್ ಅವರು ಅಲ್ಲಿದ್ದ 9 ದಿನಗಳಲ್ಲಿಏಳು ಬೇರೆ ಬೇರೆ ಚಟುವಟಿಕೆಗಳಲ್ಲಿ ತಮ್ಮ ಅಭಿಪ್ರಾಯ, ಅನುಭವವನ್ನು ಹಂಚಿಕೊಳ್ಳಲು ಅವರನ್ನು ಆಹ್ವಾನಿಸಲಾಯಿತು. ಮನ್ಸೂರ್ ಅವರು ಅಲ್ಲಿ ಮೂರು ಆರ್-ಗಳು, ರೆಡ್ಯೂಸ್, ರಿಯೂಸ್, ರಿಸೈಕಲ್ (3 R’s – Reduce, Reuse, Recycle: ಕಡಿಮೆ ತ್ಯಾಜ್ಯ, ತ್ಯಾಜ್ಯದ ಮರುಬಳಕೆ, ತ್ಯಾಜ್ಯ ಪುನರುತ್ಪಾದನೆ) ಕುರಿತು ಮಾತಾಡಿದರು. ಮೊದಲ ಎರಡು ಬಹಳ ಮುಖ್ಯವಾದವು- ನಾವು ವಸ್ತುಗಳನ್ನು ಬೇಕಾಬಿಟ್ಟಿ ಬಳಸುವುದನ್ನು ಕಡಿಮೆ ಮಾಡಬೇಕು ಮತ್ತು ಬಳಸಿದ ನಂತರ ಕಸ ಎಂದು ವಸ್ತುಗಳನ್ನು ಬೀಸಾಕುವ ಮುನ್ನ ಸಾಧ್ಯವಾದುದೆಲ್ಲವನ್ನು ಮರುಬಳಕೆ ಮಾಡಬೇಕು. ಕೊನೆಯ ಉಪಾಯವೆಂದರೆ ಪುನರುತ್ಪಾದನೆಕೊನೆಯ ಉಪಾಯವಾಗಬೇಕು. ಏಕೆಂದರೆ ಇದಕ್ಕೆ ಸಮಯ ಹಿಡಿಯುತ್ತದೆ. ಶಕ್ತಿ ಖರ್ಚಾಗುತ್ತದೆ ಮತ್ತು ಆದರೂ ಅದೇ ಗುಣಮಟ್ಟದ ಪ್ಲ್ಯಾಸ್ಟಿಕನ್ನು ತಯಾರಿಸಲು ಸಾಧ್ಯವಾಗದೇ ಇರಬಹುದು. ಆದರೂ, ವರ್ಜಿನ್ ಪ್ಲ್ಯಾಸ್ಟಿಕನ್ನು ತಯಾರಿಸಿ ಹೆಚ್ಚು ಪಳೆಯುಳಿಕೆ ಇಂಧನಗಳನ್ನು ಬಳಸುವುದಕ್ಕಿಂತ ಪುನರುತ್ಪಾದನೆ ಹೆಚ್ಚು ಒಳ್ಳೆಯದು.

2016ರಲ್ಲಿ, ಇಂದಿರಾಅವರು ಇಂಡೋನೇಷ್ಯದ ಸುರಬಾಯದಲ್ಲಿ ನಡೆದ, ಎಕ್ಸ್ಪರ್ಟ್ ಗ್ರೂಪ್ ಮೀಟಿಂಗ್ ಆನ್ ಇನ್ಫಾರ್ಮಲ್ ಇಕಾನಮಿಯಲ್ಲಿ, ಹೌಸಿಂಗ್ ಅಂಡ್ ಸುಸ್ಟೇನಬಲ್ ಅರ್ಬನ್ ಡೆವಲಪ್ಮೆಂಟಿನ ಮೂರನೇ ಗೋಷ್ಠಿಯಲ್ಲಿ ಪ್ರಿಪರೇಟರಿ ಕಮಿಟಿ ಆಫ಼್ ದ ಥರ್ಡ್ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸಿನಲ್ಲಿ ಮಾತಾಡಿದರು. ಈ ಸಮ್ಮೇಳನವನ್ನು ಇತರ ಸಂಸ್ಥೆಗಳ ಸಹಯೋಗದಲ್ಲಿ ಸಂಘಟಿಸಿದ್ದು ಗ್ಲೋಬಲ್ ಸೋಶಿಯಲ್ ಇಕಾನಮಿ ಫ಼ೋರಮ್(GSEF). ಜಗತ್ತಿನಾದ್ಯಂತದಿಂದ ಬಂದಿದ್ದ ಭಾಗಿಗಳನ್ನು ಉದ್ದೇಶಿಸಿ ಮುನಿಸಿಪಲ್ ಕಾರ್ಪೊರೇಷನ್, ಅನೌಪಚಾರಿಕ ವಲಯದಲ್ಲಿರುವ ತ್ಯಾಜ್ಯ ಆಯುವವರ ಸವಾಲುಗಳು, ತ್ಯಾಜ್ಯವನ್ನು ಪ್ರತ್ಯೇಕಿಸುವುದರ ಮಹತ್ವ ಮತ್ತು ಇದಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮಾತಾಡುವ ಅವಕಾಶ ಇಂದಿರಾಅವರಿಗೆ ದೊರಕಿತು. ಕಬೀರ್ ಅರೋರಾಅವರೊಂದಿಗೆ ಹೋಗಿದ್ದರೂ ಬೆಂಗಳೂರನ್ನು ಪ್ರತಿನಿಧಿಸಿದ್ದು ಇವರೊಬ್ಬರೇ.

2016ರಲ್ಲಿ, ಹಸಿರು ದಳ (SWMRT ಮತ್ತು AIW ನಂಥ ಇತರ ಸಂಸ್ಥೆಗಳೊಂದಿಗೆ) ಸೇರಿ, ಕೇಂದ್ರದ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯ(MoEF&CC)ದೊಂದಿಗೆ ಸಮಾಲೋಚನೆ ನಡೆಸಿತು.ಇದರ ಫಲವಾಗಿ ತ್ಯಾಜ್ಯ ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರನ್ನು, ತ್ಯಾಜ್ಯದ ಸಂಗ್ರಹ ಮತ್ತು ನಿರ್ವಹಣೆಯ ಕುರಿತಾದ, ಘನ ತ್ಯಾಜ್ಯ ನಿರ್ವಹಣಾ ನಿಯಮಗಳು, 2016ರಲ್ಲಿ ಸೇರಿಸಿಕೊಳ್ಳುವ ಕುರಿತು ಮಾರ್ಗಸೂಚಿಗಳನ್ನು ರೂಪಿಸುವಂತಾಯಿತು.

2017ರಲ್ಲಿ, ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳುಮನೆಮನೆಯಿಂದ ಪ್ರತ್ಯೇಕಿತ ತ್ಯಾಜ್ಯವನ್ನು ಸಂಗ್ರಹಿಸುವ ಸಾಧ್ಯವಾಗುವಂತೆ ಬಿಬಿಎಂಪಿ ತ್ಯಾಜ್ಯ ಆಯುವವರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತು. ಆ ಮುಂಚೆ ಈ ಕಾರ್ಯವನ್ನು ಘನ ತ್ಯಾಜ್ಯ ನಿರ್ವಹಣೆಯ ಗುತ್ತಿಗೆದಾರರು ಮಾಡುತ್ತಿದ್ದರು. ಹಸಿರು ದಳ ತನ್ನ ಕಾರ್ಯಾಚರಣೆಯನ್ನು ಮೈಸೂರು ಮತ್ತು ಚಾಮರಾಜನಗರಕ್ಕೆ ವಿಸ್ತರಿಸಿತು, ಅಲ್ಲಿನ ತ್ಯಾಜ್ಯ ಸಂಗ್ರಹಣೆಯ ಸಮುದಾಯಗಳು ಮತ್ತು ಸ್ಥಳೀಯ ಮುನಿಸಿಪಲ್ ಪ್ರಾಧಿಕಾರಗಳೊಂದಿಗೆ ಅಂತಹದೇ ಸಂಬಂಧಗಳನ್ನು ಬೆಳೆಸಿಕೊಂಡಿತು. ಔದ್ಯಮಿಕ ಗುರುತು ಕಾರ್ಡುಗಳನ್ನು ನೀಡಲು, ಮೂರು ಧಾರೆಗಳಲ್ಲಿ ತ್ಯಾಜ್ಯವನ್ನು ಸಂಗ್ರಹಿಸುವುದಕ್ಕಾಗಿ ಅಗತ್ಯವಾದ ಸೌಕರ್ಯವನ್ನು ಸೃಷ್ಟಿಸಲು, ಮತ್ತು ತ್ಯಾಜ್ಯ ಆಯುವವರನ್ನು ಮುನಿಸಿಪಲ್ ಘನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯಲ್ಲಿ ಏಕೀಕರಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಮಗೆ ಅನುಮತಿ ದೊರಕಿತು.

ಸಾಂಸ್ಥಿಕ ಹಣಕಾಸು ಮತ್ತು ಉಳಿತಾಯ ಖಾತೆಗಳ ಪ್ರಯೋಜನ ಪಡೆಯುವುದು ಮತ್ತು ತಮ್ಮ ಲಾಭಕ್ಕಾಗಿಯೇ ಈ ಹಣಕಾಸು ಸಂಸ್ಥೆಗಳನ್ನು ಬಳಸಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ತ್ಯಾಜ್ಯ ಆಯುವವರ ಕೌಶಲವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಹಣಕಾಸು ಸಾಕ್ಷರತೆ ತರಬೇತಿಗಳನ್ನು ರೂಪಿಸಲಾಯಿತು. ಮುಂದೆ ಇದನ್ನು ಅವರೇ ಮಾಡಿಕೊಂಡುಹೋಗುವ ಕಾರ್ಯವಾಗುವಂತೆ ಕೆಲವು ತ್ಯಾಜ್ಯ ಅಯುವವರನ್ನೇ ಇತರರಿಗೆ ತರಬೇತಿ ಕೊಡುವ ಹಾಗೆ ತರಬೇತಿದಾರರಾಗಿ ಸಜ್ಜುಗೊಳಿಸಲಾಗಿದೆ. ನ್ಯಾಷನಲ್ ಸಫ಼ಾಯಿ ಕರ್ಮಚಾರಿ ಫ಼ೈನಾನ್ಸ್ ಅಂಡ್ ಡೆವೆಲಪ್ಮೆಂಟ್ ಕಾರ್ಪೋರೇಷನ್ (NSKFDC) ಮತ್ತು ವಿಜಯ ಬ್ಯಾಂಕ್ ಮೊದಲ ಬಾರಿಗೆ, DWCCಗಳನ್ನು ನಿರ್ವಹಿಸುತ್ತಿರುವ ತ್ಯಾಜ್ಯ ಆಯುವವರಿಗಾಗಿ ಓವರ್ ಡ್ರ್ಯಾಫ಼್ಟ್ ಸೌಕರ್ಯವನ್ನು ಕೊಡಲಾಗಿದೆ. ಈ ಪ್ರಾಯೋಗಿಕ ಯೋಜನೆಗಾಗಿ ಒಂಭತ್ತು ತ್ಯಾಜ್ಯ ಆಯುವವರನ್ನು ಆಯ್ಕೆ ಮಾಡಲಾಗಿತ್ತು; ಎಲ್ಲರೂ ಸಕಾಲಕ್ಕೆ ಸಾಲವನ್ನು ತೀರಿಸಿದರು, ಕೆಲವರಂತೂ ಸಾಕಷ್ಟು ಕ್ರೆಡಿಟನ್ನು ಜಮಾಮಾಡಿಕೊಂಡು ತಮ್ಮ ಕ್ರಿಡಿಟ್ ಮಿತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಮುಂಚೆ ತ್ಯಾಜ್ಯ ಆಯುವವರಾಗಿದ್ದ ಹೆಚ್ಚಿನ DWCCಗಳ ನಿರ್ವಾಹಕರಿಗೆ ಈ ಮುಂಚೆ ಯಾವುದೇ ಬಗೆಯ ಬ್ಯಾಂಕ್ ಖಾತೆ ಇರಲಿಲ್ಲ. ಸಾಂಸ್ಥಿಕ ಹಣಕಾಸು ವ್ಯವಸ್ಥೆಯೊಂದಿಗೆ ಇದು ಅವರ ಮೊದಲ ಅನುಭವವಾಗಿತ್ತು. ಓವರ್ ಡ್ರ್ಯಾಫ್ಟಿನಲ್ಲಿ ಸಾಲ ತೆಗೆದುಕೊಳ್ಳುವ ಸೌಕರ್ಯ ನೀಡಿದ್ದು, ಸಾಲವನ್ನು ತೀರಿಸುತ್ತಾರೆ, ಒಬ್ಬ ಚಿಕ್ಕ ಉದ್ಯಮಿಯ ಶಿಸ್ತಿನಿಂದ ಹಣವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ ಎನ್ನುವುದರ ಕುರಿತು ಆಪರೇಟರುಗಳ ಮೇಲೆ ಸಂಸ್ಥೆಗಳು ಇರಿಸಿದ ಅಭೂತಪೂರ್ವ ವಿಶ್ವಾಸದ ಧ್ಯೋತಕವಾಗಿದೆ.

2019ರಲ್ಲಿ ನಾವು ನಮ್ಮ ಕಾರ್ಯಾಚರಣೆಯನ್ನು ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮಂಗಳೂರು ಮತ್ತು ಆಂಧ್ರ ಪ್ರದೇಶದ ರಾಜಮುಂಡ್ರಿ, ತಮಿಳು ನಾಡಿನ ತಿರುಚಿರಾಪಳ್ಳಿ ಮತ್ತು ಕೊಯಂಬತ್ತೂರು ನಗರಗಳಿಗೆ ವಿಸ್ತರಿಸಿದೆವು. ಆ ನಗರಗಳಲ್ಲಿ ಕೆಲಸ ಮಾಡುವಾಗ, ಸ್ಥಳೀಯ ಸಮುದಾಯವನ್ನು ಸಂಪರ್ಕಿಸುವುದು, ಸ್ಥಳೀಯ ಮುನಿಸಿಪಲ್ ವ್ಯವಸ್ಥೆಯೊಂದಿಗೆ ಕೆಲಸ ಮಾಡುವುದು ಇವುಗಳ ಕುರಿತು ನಾವು ಈಗಾಗಲೇ ಅನುಸರಿಸುತ್ತಿದ್ದ ವಿಧಾನಗಳು ಮುಂದುವರಿದವು, ಇನ್ನು ಕೆಲವು ಹೊಸ ಕಾರ್ಯತಂತ್ರಗಳನ್ನೂ ಕಂಡುಕೊಳ್ಳಬೇಕಾಯಿತು. ಮಂಗಳೂರಿನಲ್ಲಿ ನದಿಗಳು ಮತ್ತು ಸಮುದ್ರ ತೀರ ಇರುವುದರಿಂದ ವಿಭಿನ್ನ ಮಟ್ಟದ ಬ್ಲ್ಯಾಕ್ ಸ್ಪಾಟ್ ಚಟುವಟಿಕೆಗಳು ಅಲ್ಲಿ ಕಂಡುಬರುತ್ತವೆ, ಮತ್ತು ತ್ಯಾಜ್ಯ ಅಯುವವರ ಸಮುದಾಯದಲ್ಲಿ ಮೀನುಗಾರ ಸಮುದಾಯದವರೂ ಇರುತ್ತಾರೆ.

ಹುಬ್ಬಳ್ಳಿ-ಧಾರವಾಡ ಮತ್ತು ರಾಜಮುಂಡ್ರಿ ಟೈರ್-2 ನಗರಗಳು. ಇಲ್ಲಿನ ತ್ಯಾಜ್ಯ ಸೃಷ್ಟಿಯ ಸ್ವಭಾವವು ನಾವು ಮೈಸೂರಿನಂಥ ’ಚಿಕ್ಕ’ ನಗರಗಳಲ್ಲಿ ಕಂಡಿದ್ದಕ್ಕಿಂತ ಭಿನ್ನವಾಗಿವೆ. ತ್ರಿಚಿ ಮತ್ತು ಕೊಯಂಬತ್ತೂರುಗಳಲ್ಲಿಹಲವು ನೈರ್ಮಲ್ಯ ಕಾರ್ಯಗಳಲ್ಲಿ ಸಮುದಾಯ ತೊಡಗಿರುವ ಬಲವಾದ ಪದ್ಧತಿಯಿತ್ತು, ಆದರೆ ನೇರವಾಗಿ ತ್ಯಾಜ್ಯ ಆಯುವ ಸಮುದಾಯಗಳು ಬಹಳ ಕಡಿಮೆ ಇದ್ದವು. ಈ ಸಮುದಾಯಗಳೊಂದಿಗೆ ಮತ್ತು ಸ್ಥಳೀಯ ಸರಕಾರಗಳೊಂದಿಗೆ ಕೆಲಸ ಮಾಡುವ ಮೂಲಕ ನಮಗೆ ಹಸಿರು ದಳದ, ಅನೌಪಚಾರಿಕ ಕಾರ್ಮಿಕರನ್ನು ಔಪಚಾರಿಕ, ಸುವ್ಯವಸ್ಥಿತ ಮತ್ತು ಪ್ರತ್ಯೇಕಿತ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ವ್ಯವಸ್ಥೆಯಲ್ಲಿ ಏಕೀಕರಿಸುವ ಕಾರ್ಯವಿಧಾನದ ಮೂಲವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು.

ಇದರೊಂದಿಗೆ, ನಾವು ವಸತಿ ಸೌಕರ್ಯದ ಕುರಿತೂ ಕೆಲಸ ಮಾಡುತ್ತಿದ್ದೇವೆ. ವಸತಿ ಸೌಕರ್ಯವು ಕುಟುಂಬದ ಸುರಕ್ಷಿತತೆಯನ್ನು ಹೆಚ್ಚಿಸುತ್ತದೆ: ಮೂಲಭೂತ ಸೌಲಭ್ಯಗಳೊಂದಿಗೆ ಇರುವ ಸ್ಥಿರವಾದ ನಿವಾಸ ತ್ಯಾಜ್ಯ ಆಯುವವರ ಬದುಕಿನಲ್ಲಿ ಹೊಸ ಅವಕಾಶಗಳನ್ನು ಮತ್ತು ಮಹತ್ವದ ಬದಲಾವಣೆಯನ್ನು ತರುತ್ತದೆ. ಯಾವಾಗಬೇಕಾದರೂ ತೆರವು ಮಾಡಬೇಕಾಗಿ ಬರುವ ಆತಂಕವಿಲ್ಲದಿರುವ ಸುರಕ್ಷಿತ ಮನೆಗಳು ಕುಟುಂಬಗಳಿಗೆ ಭಾರೀ ಸಮಾಧಾನದ ವಿಚಾರ: ಇಂಥ ಮನೆಯ ವಿಳಾಸದ ಅಧಿಕೃತ ದಾಖಲೆಯೊಂದಿಗೆ ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಬಹುದು, ಸಾಮಾಜಿಕ ಲಾಭಗಳು ಮತ್ತು ಗುರುತುಗಳಿಗಾಗಿ ಅರ್ಜಿ ಸಲ್ಲಿಸಬಹುದು, ಮತ್ತು ಇತರ ಸೌಲಭ್ಯಗಳಿಗೆ ಪರಿಗಣಿಸಲ್ಪಡುವ ಅವಕಾಶಗಳು ಸೃಷ್ಟಿಯಾಗುತ್ತವೆ.

ಬಿಬಿಎಂಪಿ 2020ರಲ್ಲಿ ತನ್ನ ಘನ ತ್ಯಾಜ್ಯ ನಿರ್ವಹಣೆ ಬೈಲಾವನ್ನು ಬಿಡುಗಡೆ ಮಾಡಿತು. ಅದರಲ್ಲಿ ಹಸಿರು ದಳ ಮತ್ತು ಇನ್ನಿತರ ಹಕ್ಕೊತ್ತಾಯ ಗುಂಪುಗಳು ನೀಡಿದ ಸಲಹೆ ಸೂಚನೆಗಳೂ ಒಳಗೊಂಡಿವೆ.

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ರಾಷ್ಟ್ರೀಯ ಲಾಕ್ ಡೌನ್ ಘೋಷಿಸಲ್ಪಟ್ಟಾಗ, ಬೆಂಗಳೂರಿನಲ್ಲಿ ಸಾವಿರಾರು ತ್ಯಾಜ್ಯ ಆಯುವವರ ಕುಟುಂಬಗಳು ತಮ್ಮ ನಿಯತವಾಗಿ ಬರುತ್ತಿದ್ದ ಆದಾಯದ ಮೂಲಗಳಿಂದ ವಂಚಿತರಾಗಿ ಹಸಿವೆಯಿಂದ ಕಂಗೆಡುವ ಪರಿಸ್ಥಿತಿ ಏರ್ಪಟ್ಟಿತು. ಸ್ವಲ್ಪವಾದರೂ ತಕ್ಷಣದ ಪರಿಹಾರವನ್ನು ಒದಗಿಸುವುದು ತುರ್ತು ಅಗತ್ಯವಾಗಿತ್ತು. ಕರ್ನಾಟಕಾದ್ಯಂತ ಮತ್ತು ತ್ರಿಚಿ ಮತ್ತು ಕೊಯಂಬತ್ತೂರು, ಮತ್ತು ರಾಜಮುಂಡ್ರಿಯಲ್ಲಿ ನಾವು ಸುಮಾರು 50,000 ತ್ಯಾಜ್ಯ ಆಯುವ ಮತ್ತು ದಿನಗೂಲಿಯ ಮೇಲೆ ದುಡಿಯುವ ಕುಟುಂಬದವರಿಗೆ ಆಹಾರದ ಪರಿಹಾರ ಮತ್ತು ನೈರ್ಮಲ್ಯದ ಬೆಂಬಲವನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿದೆವು.

ಮುಂದಿನ ಹೆಜ್ಜೆಗಳು

ನಮ್ಮ ಹತ್ತು ವರ್ಷಗಳ ಪಯಣ ಸುದೀರ್ಘವಾಗಿದೆ, ಆದರೂ ಬಹಳ ಚಿಕ್ಕದು ಅನ್ನಿಸುತ್ತಿದೆ. ಮಾಡಿದ್ದು ಬಹಳಷ್ಟಾದರೂ ಇನ್ನೂ ಮಾಡಬೇಕಾದದ್ದು ಬಹಳಷ್ಟು ಇದೆ!

ನಮ್ಮ ಮುಂದಿನ ಲಕ್ಷ್ಯ, ಸ್ಥಳೀಯ ಮತ್ತು ವಲಸೆ ಬಂದಿರುವ, ಮತ್ತು ಬಾಡಿಗೆ ಮನೆಗಳಲ್ಲಿಯೋ ಇನ್ನೂ ರಸ್ತೆಬದಿಗಳಲ್ಲಿಯೋ ವಾಸಿಸುತ್ತಿರುವ ತ್ಯಾಜ್ಯ ಆಯುವವರಿಗಾಗಿ ಸಾರ್ವಜನಿಕ ವಸತಿಯ ಯೋಜನೆಗಳ ಪ್ರಯೋಜನವನ್ನು ಒದಗಿಸುವುದಾಗಿದೆ. ನಮ್ಮ ಸರಕಾರವೂ ಸಾರ್ವಜನಿಕ ವಸತಿಯ ಕುರಿತು ಸಾಕಷ್ಟು ಆಸಕ್ತಿಯನ್ನು ಹೊಂದಿದೆ ಮತ್ತು ಈ ಸೌಕರ್ಯವನ್ನು ಪಡೆಯುವ ಸಲುವಾಗಿ ಅಗತ್ಯವಿರುವ ಕೆಐಸಿ ದಾಖಲೆಯನ್ನು ಪಡೆಯುವಲ್ಲಿ ನಾವು ಕೊಟ್ಟಕೊನೆಯ ಮತ್ತು ಮಹತ್ವದ ಕೊಂಡಿಯಾಗಿದ್ದೇವೆ. ಇದು ಸಹನೆ ಮತ್ತು ಸಮಯ ತೆಗೆದುಕೊಳ್ಳುವ, ಸುದೀರ್ಘವಾದ ಉದ್ದನೆಯ ಪಯಣ ಎಂದು ನಮಗೆ ಗೊತ್ತಾಗಿದೆ.

ವಸತಿ ಸೌಕರ್ಯದ ಜೊತೆಯಲ್ಲಿ ನಾವು ಆರೋಗ್ಯ ಸೇವೆಗಳು, ಆಹಾರ ಭದ್ರತೆ ಇತ್ಯಾದಿ ಇತರ ಸಾಮಾಜಿಕ ಭದ್ರತೆಗಳ ಯೋಜನೆಗಳಲ್ಲಿ ತ್ಯಾಜ್ಯ ಆಯುವವರನ್ನೂ ಸೇರಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತೇವೆ. ಕೊನೆಯದಾಗಿ, ಕೌಶಲಗಳ ಸಬಲೀಕರಣ, ತ್ಯಾಜ್ಯ ಆಯುವವರ ಕುಟುಂಬದವರಿಗೆ ನಿರೀಕ್ಷಿತ, ನಿಶ್ಚಿತ ಆದಾಯ ಬರುವಂಥ ಸೃಜನಶೀಲ ಜೀವನೋಪಾಯಗಳನ್ನು ಸೃಷ್ಟಿಸುವುದು ತ್ಯಾಜ್ಯ ಆಯುವವರ ಜೊತೆಯಲ್ಲಿ ನಾವು ನೇರವಾಗಿ ಕೆಲಸ ಮಾಡುತ್ತಿರುವುದರ ಮೂರನೇ ಆಯಾಮವಾಗಿದೆ.

ಜೀವನೋಪಾಯಗಳು ಮತ್ತು ಘನ ತ್ಯಾಜ್ಯ ನಿರ್ವಹಣೆ ತರಬೇತಿಯ ಕ್ಷೇತ್ರದಲ್ಲಿ ಸಂಶೋಧನೆಯು ತ್ಯಾಜ್ಯ ಪರಿಸರವ್ಯವಸ್ಥೆಗೆ ಸಾಂಸ್ಥಿಕವಾದ ಬದಲಾವಣೆಗಳನ್ನು ತರುವ ಕುರಿತು ನಾವು ಮಾಡುವ ಹಕ್ಕೊತ್ತಾಯ ಮಾಡುವ ನೆಲೆಗಟ್ಟಾಗಿ ಮುಂದುವರಿಯುತ್ತದೆ.

ನಾವು ನಮ್ಮ ಪ್ರಸ್ತುತ ರೂಪದಲ್ಲಿ ಇರುವ ಅಗತ್ಯವಿರದ, ತ್ಯಾಜ್ಯ ಆಯುವವರು ಸ್ವಯಂ ತಮ್ಮ ಬೆಂಬಲ ವ್ಯವಸ್ಥೆಯಾಗಿರುವ, ವಕಾಲತು ವಹಿಸುವವರಾಗಿರುವ ದಿನವನ್ನು ನಾವು ಎದುರು ನೋಡುತ್ತಿದ್ದೇವೆ. ಆ ದಿನ ಬಹಳ ದೂರವಿಲ್ಲ ಎಂಬುದು ನಮ್ಮ ಅಚಲ ವಿಶ್ವಾಸವಾಗಿದೆ.

10 Years in the Making

    • ನಳಿನಿ ಶೇಕರ್ ಅವರು ಅಲಯನ್ಸ್ ಆಫ಼್ ಇಂಡಿಯನ್ ವೇಸ್ಟ್ ಪಿಕರ್ಸ್ ಸಂಚಾಲಕರಾಗಿ ಘನ ತ್ಯಾಜ್ಯ ನಿರ್ವಹಣೆಯ ಒಂದು ಪ್ರಕರಣದಲ್ಲಿ ಲೋಕಅದಾಲತ್ತಿನಲ್ಲಿ ಒಂದು ಅಫಿಡವಿಟ್ ಸಲ್ಲಿಸಿದರು.
    • ಲೋಕಅದಾಲತ್ತು ತ್ಯಾಜ್ಯ ಆಯುವವರಿಗೆ ಔದ್ಯೋಗಿಕ ಗುರುತು ಕಾರ್ಡುಗಳನ್ನು ನೀಡುವ ಸಲುವಾಗಿ ಅವರ ನೋಂದಾವಣಿಯನ್ನು ಮಾಡಬೇಕು ಎಂದು ಬಿಬಿಎಂಪಿಗೆ ನಿರ್ದೇಶನವನ್ನು ನೀಡಿತು.
    • ತ್ಯಾಜ್ಯ ಆಯುವವರನ್ನು ಗುರುತಿಸಲು ಮತ್ತು ನೋಂದಾಯಿಸಲು ಬಿಬಿಎಂಪಿ ಮತ್ತು ಹಸಿರು ದಳಗಳ ಮೂಲಕ ಒಂದು ನವೀನವಾದ ವಿಧಾನವನ್ನು ಕಂಡುಹಿಡಿಯಲಾಯಿತು. ಇದರಲ್ಲಿ ತ್ಯಾಜ್ಯ ಆಯುವವರು ಸ್ವಯಂಘೋಷಣೆ ಮಾಡಿಕೊಳ್ಳಬೇಕು ಮತ್ತು ಬಿಬಿಎಂಪಿ ಮತ್ತು ಒಬ್ಬ ನಾಗರಿಕ ಸಮಾಜ ಸಂಸ್ಥೆಯ ಒಬ್ಬ ಸದಸ್ಯರ ಸಹಿ ಇರಬೇಕಾಗಿತ್ತು.
    • ಆಗಸ್ಟ್ ತಿಂಗಳಲ್ಲಿ ನಗರಕ್ಕಾಗಿ ಮಂಜೂರು ಮಾಡಲಾದ 225 ಗುರುತಿನ ಕಾರ್ಡುಗಳನ್ನು ಬೆಂಗಳೂರಿನ ಕಮಿಷನರರ ಮೂಲಕ ವಿತರಣೆ ಮಾಡಲಾಯಿತು- ಭಾರತದಲ್ಲಿ ತ್ಯಾಜ್ಯ ಆಯುವವರ ಹೋರಾಟದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು.
    • 5,000 ತ್ಯಾಜ್ಯ ಆಯುವವರಿಗೆ ಗುರುತಿನ ಕಾರ್ಡುಗಳನ್ನು ವಿತರಿಸಲಾಯಿತು.
    • ರೇಡಿಯೋ ಆಕ್ಟಿವ್ 90.4 MHz ಸಮುದಾಯ ರೇಡಿಯೋ ನಿಲಯದಿಂದ “ಕಸ ಶ್ರಮಿಕ ಪರಿಸರ ರಕ್ಷಕ” ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು. ಇದರ ನಿರೂಪಣೆಯನ್ನೂ ತ್ಯಾಜ್ಯ ಆಯುವವರೇ ಮಾಡಿದರು.
    • ಮೊದಲ ಸಾಮಾಜಿಕ ಭದ್ರತೆಯ ಶಿಬಿರ 2012ನ್ನು ನಡೆಸಿ, ಹಸಿರು ದಳದ ಮೂಲಕ 471 ತ್ಯಾಜ್ಯ ಆಯುವವರು ಸಾಮಾಜಿಕ ಭದ್ರತೆಯನ್ನು ಪಡೆಯುವಂತೆ ಸಹಾಯ ಮಾಡಲಾಯಿತು.
    • ಮಂಡೂರು ಭೂಭರ್ತಿಯನ್ನು ಹಠಾತ್ತಾಗಿ ಮುಚ್ಚಿದಾಗ, ಬೆಂಗಳೂರಿನಾದ್ಯಂತ ಮಿಶ್ರ ತ್ಯಾಜ್ಯದಿಂದ ಸುಮಾರು 2 ಟನ್ನುಗಳಷ್ಟು ಘನ ತ್ಯಾಜ್ಯವನ್ನು ಪುನಃ ಸಂಪಾದನೆ ಮಾಡಲಾಯಿತು.
    • ಬಿಬಿಎಂಪಿಯ ಒಣ ತ್ಯಾಜ್ಯ ಸಂಗ್ರಹ ಕೇಂದ್ರದ ನಿರ್ವಹಣೆಯನ್ನು ವಿಕೇಂದ್ರೀಕರಿಸುವ ಸಲುವಾಗಿ ಬಿಬಿಎಂಪಿ ಮತ್ತು ಹಸಿರು ದಳಗಳ ನಡುವೆ ಮೊದಲ ಒಪ್ಪಂದಕ್ಕೆ ಸಹಿ ಮಾಡಲಾಯಿತು.
    • ಬೆಂಗಳೂರಿನಲ್ಲಿ ತ್ಯಾಜ್ಯ ಆಯುವವರ ಕುರಿತು ಮೊದಲ ಅಧ್ಯಯನವನ್ನು ಮಾಡಲಾಯಿತು, ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ರೌಂಡ್ ಟೇಬಲ್.
    • ಆರೋಗ್ಯ ಶಿಬಿರಗಳನ್ನು ಆರಂಭಿಸಲಾಯಿತು.
    • ಶಿಕ್ಷಣ ಹಕ್ಕು ಕಾಯ್ದೆಯ ಮೂಲಕ ಮೊದಲ ಬಾರಿ, ತ್ಯಾಜ್ಯ ಆಯುವವರ ಹದಿನೈದು ಮಕ್ಕಳನ್ನು ಖಾಸಗಿ ಶಾಲೆಯೊಂದರಲ್ಲಿ ಸೇರಿಸಲಾಯಿತು.
    • ಬಿಬಿಎಂಪಿ ಅನೌಪಚಾರಿಕ ತ್ಯಾಜ್ಯ ಆಯುವವರು ಮತ್ತು ಸ್ಕ್ರ್ಯಾಪ್ ಡೀಲರುಗಳನ್ನು ನಗರದ ಔಪಚಾರಿಕ ಘನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯಲ್ಲಿ ಏಕೀಕರಿಸಿತು.
    • ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಆಪತ್ಕಾರಿಯಾದ ಉದ್ಯೋಗಗಳಲ್ಲಿ ತೊಡಗಿರುವವರ ಮಕ್ಕಳಿಗೆ ಕೊಡ ಮಾಡುವ ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿವೇತನಗಳನ್ನು ನೀಡುವ ಯೋಜನೆ ಜುಲೈ 2013ರಲ್ಲಿ ಜಾರಿಗೆ ಬಂದಿತು. ಆದರೂ, ಕರ್ನಾಟಕ ಸರಕಾರವು ಬಹಳ ಕಾಲ ಇದನ್ನು ಬಳಸಿಕೊಳ್ಳಲಿಲ್ಲ. ತನ್ನ ನಿರಂತರ ಹಕ್ಕೊತ್ತಾಯದ ಮೂಲಕ ಹಸಿರು ದಳ ತ್ಯಾಜ್ಯ ಆಯುವವರ ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ದೊರಕುವಂತೆ ಮಾಡಿತು.
    • ಕೌಶಲ ಸುಧಾರಣೆ ತರಬೇತಿಯ ಆರಂಭ: ಒಣ ತ್ಯಾಜ್ಯ ನಿರ್ವಹಣೆಯ ಮತ್ತು ಕಡಿಮೆ ಮೌಲ್ಯ ಅಥವಾ ಪುನರುತ್ಪಾದನೆಗೆ ಅರ್ಹವಲ್ಲದ ತ್ಯಾಜ್ಯದ ಕುರಿತು 2,250 ಪೌರಕಾರ್ಮಿಕರು ಈ ತರಬೇತಿಗಳಲ್ಲಿ ಭಾಗವಹಿಸಿದ್ದಾರೆ.
    • ಹಸಿರು ದಳ ಮೂರನೇ ಪಕ್ಷವಾಗಿರುವ ಹಾಗೆ, DWCCಯನ್ನು ಕಾರ್ಯಚಾಲಿಸಲು ತ್ಯಾಜ್ಯ ಆಯುವವರು ಮತ್ತು ಬಿಬಿಎಂಪಿ ನಡುವೆ ಮೊದಲ ಒಪ್ಪಂದಕ್ಕೆ 24 ಏಪ್ರಿಲ್ ರಂದು ಸಹಿ ಹಾಕಲಾಯಿತು. ಇದು ತ್ಯಾಜ್ಯ ಆಯುವವರು ಸರಕಾರದ ಜೊತೆ ನೇರವಾಗಿ ಒಂದು ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಿದ ಅಪರೂಪದ ಕ್ಷಣವಾಗಿತ್ತು.
    • ಮೊದಲ ಮಕ್ಕಳ ಶಿಬಿರ
    • ತ್ಯಾಜ್ಯವನ್ನು ಪ್ರತ್ಯೇಕಿಸುವ ಮತ್ತು DWCC ಕುರಿತು ಬಿಬಿಎಂಪಿಯ ಅಧಿಕೃತ ಅನುಮತಿಯೊಂದಿಗೆ 2,250 ಪೌರಕಾರ್ಮಿಕರಿಗೆ ತರಬೇತಿ ನೀಡಲಾಯಿತು.
    • ಜ಼ುಆರಿ ಸಿಮೆಂಟ್ಸ್ ಚಿಂದಿ, ಬಹುಪದರದ ಪ್ಲ್ಯಾಸ್ಟಿಕ್ ಮತ್ತು ಬಿಸಾಕಿದ ಚಪ್ಪಲಿ/ಶೂಗಳನ್ನು ಇಟ್ಟಿಗೆಗಳು ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಇತರ ವಸ್ತುಗಳನ್ನು ತಯಾರಿಸಲು ಐದು ಟನ್ನುಗಳಷ್ಟು ತಿರಸ್ಕೃತ ಒಣ ತ್ಯಾಜ್ಯವನ್ನು ತೆಗೆದುಕೊಳ್ಳುವುದಾಗಿ ಮುಂದೆ ಬಂದಿದೆ. ಪ್ರಯೋಗದ ಆಧಾರದ ಮೇಲೆ ಇದನ್ನು ಸಂಸ್ಕರಣೆಗೆ ಕಳಿಸಲಾಗುವುದು.
    • ಹಸಿರು ದಳ, ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯ ಲಾಭವನ್ನು ಪಡೆಯುವ ಸಲುವಾಗಿ 5,500 ತ್ಯಾಜ್ಯ ಆಯುವವರನ್ನು ಪಟ್ಟಿ ಮಾಡಲು ಮುನಿಸಿಪಲ್ ಸಂಸ್ಥೆಗೆ ಸಹಾಯ ಮಾಡಿದೆ.
    • ತರಬೇತಿ ಹೊಂದಿದ ತ್ಯಾಜ್ಯ ಆಯುವವರು ಬಿಬಿಎಂಪಿಯ ಮೊದಲ ಎರಡು ಬಯೋಗ್ಯಾಸ್ ಪ್ಲಾಂಟುಗಳನ್ನು ನಿರ್ವಹಿಸುವರು, “ಸಂಪೂರ್ಣ ತ್ಯಾಜ್ಯ ನಿರ್ವಹಣೆ” ಸೇವೆಗಳನ್ನು ಸಂಘಟಿಸಲಾಯಿತು- ಘನ ತ್ಯಾಜ್ಯ ನಿರ್ವಹಣೆ ಸೇವೆಗಳಲ್ಲಿ ಅನೌಪಚಾರಿಕ ತ್ಯಾಜ್ಯ ಕಾರ್ಮಿಕರನ್ನು ಸೇರಿಸಿಕೊಳ್ಳುವುದನ್ನು ಅಧಿಕೃತಗೊಳಿಸಲು ಜೀವನೋಪಾಯ ಅವಕಾಶಗಳು.
    • ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯವನ್ನು ಉತ್ಪಾದಿಸುವವರಿಗಾಗಿ ಬಿಬಿಎಂಪಿಯಿಂದ 22 ತ್ಯಾಜ್ಯ ಆಯುವವರನ್ನು ಪಟ್ಟಿ ಮಾಡಲಾಗಿದೆ.
      ಜಯನಗರಲ್ಲಿ ಒಳ ಕಸ ಸಂಗ್ರಹಣೆಗಾಗಿ ಮಹಿಳೆಯರು ಮಾತ್ರ ಇರುವ ಮೊದಲ ವ್ಯಾನ್ ಘಟಕದ ಕಾರ್ಯಚಾಲನೆ.
    • ಎನ್ ಜಿ ಒ ರೋಟರಿ ಸರ್ವಿಸ್ ಆವಾರ್ಡ್ 2014
    • ನಿಮ್ಮ ತೋಟದಿಂದ ಊಟ, ತಾರಸಿ ತೋಟದ ಒಂದು ಗುಂಪು ಹಸಿರು ದಳವನ್ನು ಸನ್ಮಾನಿಸಿತು.
    • ನಳಿನಿ ಶೇಕರ್ ಅವರಿಗೆ ಬೆಂಗಳೂರು ನಗರದ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
    • (ಉತ್ಸಾಹಿ ವ್ಯಕ್ತಿಗಳು ವಿವಿಧ ಸಾಮಾಜಿಕ ಮತ್ತು ಪಾರಿಸರಿಕ ಸಮಸ್ಯೆಗಳು ಕುರಿತು ಪ್ರೇರಣಾತ್ಮಕ ಕಾರ್ಯಗಳನ್ನು ಗುರುತಿಸುವ) ಸತ್ಯಮೇವ ಜಯತೆ ಎಂಬ ಟಿವಿ ಕಾರ್ಯಕ್ರಮವು ಹಸಿರು ದಳದ ಕಾರ್ಯವನ್ನು ಗುರುತಿಸಿತು.
    • ಉದ್ಯಮಿ-ತ್ಯಾಜ್ಯ ಆಯುವವರಿಗೆ ಸ್ವತ್ತನ್ನು ಸೃಷ್ಟಿಸಲು ಅವಕಾಶಗಳನ್ನು ಒದಗಿಸಲು ವಿಕೇಂದ್ರೀಕೃತ, ತಂತ್ರಜ್ಞಾನದಿಂದ ಬೆಂಬಲಿತ, ಫ್ರಾಂಚೈಸಿಯಿಂದ ಚಾಲಿತ ತ್ಯಾಜ್ಯ ನಿರ್ವಹಣೆಯ ನವೀನತಮ ವಿಧಾನವನ್ನು ಅಭಿವೃದ್ಧಿ ಪಡಿಸಲಾಯಿತು.
    • ಪರಿಸರಸ್ನೇಹಿ ವಿವಾಹ ಮತ್ತು ಸುಸ್ಥಿರ ಇವೆಂಟ್ ತ್ಯಾಜ್ಯ ನಿರ್ವಹಣೆ ಸೇವೆಯನ್ನು ಒದಗಿಸಲಾಯಿತು.
    • ನಾಗರಿಕರ ಸಕ್ರಿಯ ಸಹಯೋಗದೊಂದಿಗೆ 2 ಬಿನ್ ಒಂದು ಬ್ಯಾಗ್ ಪರಿಕಲ್ಪನೆಯನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಯಿತು.
    • ಬಯೋಡೈನಮಿಕ್ ವಿಧಾನವನ್ನು ಬಳಸಿ ಉದ್ಯಾನ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವುದರ ಸಲುವಾಗಿ ವೃತ್ತೀಯ ಸೇವೆಗಳನ್ನು ಒದಗಿಸಲಾಯಿತು.
    • ಬುಗುರಿಯನ್ನು ಪುಸ್ತಕ ಓದುವ ಕ್ಲಬ್ ಆಗಿ ಆರಂಭಿಸಲಾಯಿತು
    • ನ್ಯೂಟ್ರಿಷನ್ ಮಷ್ರೂಮ್ ಕೃಷಿ
    • DWCC: ಒಣ ತ್ಯಾಜ್ಯವನ್ನು ಡೊನೇಟ್” ಮಾಡಿ ಕಾರ್ಯಕ್ರಮ
    • ಟ್ರಕ್ಕನ್ನು ಡ್ರೈವ್ ಮಾಡಿದ ಮೊದಲ ಮಹಿಳಾ ತ್ಯಾಜ್ಯ ಆಯುವವರು
    • ದೊಡ್ಡ ಪ್ರಮಾಣದ ಸುಸ್ಥಿರ ಇವೆಂಟ್ ನಿರ್ವಹಣೆ ಸೇವೆಗಳನ್ನು ನೀಡಲಾಯಿತು
    • ತಾರಸಿ ತೋಟಗಳ ಮೂಲಕ ಜೀವನೋಪಾಯಗಳನ್ನು ಸೃಷ್ಟಿಸಲು,“ತ್ಯಾಜ್ಯ ಆಯುವುದರಿಂದ ನಗರದ ಉದ್ಯಾನದ ಮಾಲಿಗಳ ವರೆಗೆ” ಕಾರ್ಯಕ್ರಮಗಳು
    • ಬಯೋಗ್ಯಾಸ್ ಸ್ಥಾವರಗಳ ನಿರ್ವಹಣಾ ಕಾರ್ಯಸಂಚಾಲನೆ
    • ಸೇವಾ ಕೆಫ಼ೆ: ತ್ಯಾಜ್ಯ ಆಯುವವರು ಬೆಂಗಳೂರಿನಲ್ಲಿ ಪ್ಯಾರಾಡೈಮ್ ಷಿಫ಼್ಟ್-ನ ಅಡಿಯಲ್ಲಿ ಕೆಫ಼ೆ ನಡೆಸಿದರು
    • COP (Conference of the Parties) 21ನಲ್ಲಿ ತ್ಯಾಜ್ಯ ಕಾರ್ಯಕರ್ತರು
    • ಹ್ಯಾಕಥಾನ್: ಸುಮಾರು 44 ತ್ಯಾಜ್ಯ ಆಯುವವರು ಹ್ಯಾಕಥಾನಿನಲ್ಲಿ ಭಾಗವಹಿಸಿದರು
    • ಮೈಸೂರಿನ ಮುನಿಸಿಪಲ್ ಪ್ರಾಧಿಕಾರಿಗಳು ಅಲ್ಲಿನ ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳನ್ನು ಉಸ್ತುವಾರಿಯನ್ನು ಕೈಗೆತ್ತಿಕೊಳ್ಳುವಂತೆ ಹಸಿರು ದಳವನ್ನು ಕೇಳಿದರು
    • ಘನ ತ್ಯಾಜ್ಯ ನಿರ್ವಹಣೆ ನಿಯಮಾವಳಿ ಕೊಂಡಿ
    • ಬನಶಂಕರಿಯಲ್ಲಿ ಬುಗುರಿ ಸಮುದಾಯ ಗ್ರಂಥಾಲಯವನ್ನು ಸ್ಥಾಪಿಸಲಾಯಿತು
    • ಬೆಂಗಳೂರಿನ ಎಚ್ ಎ ಎಲ್ ಕಾಲನಿಯಲ್ಲಿ ಸಮಗ್ರ ತ್ಯಾಜ್ಯ ಸಂಗ್ರಹಣೆ ಸೇವೆಗಳಿಗಾಗಿ ಕರೆದ ಟೆಂಡರಿನಲ್ಲಿ ಹಸಿರು ದಳ ಭಾಗವಹಿಸಿತು. ಈ ಕಾರ್ಯಕ್ರಮವು ಒಟ್ಟಾರೆ 3,500 ಕುಟುಂಬಗಳಿಗೆ ತಲುಪುತ್ತದೆ, ಮತ್ತು 26 ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ
    • ತ್ಯಾಜ್ಯ ಆಯುವವರ ಮಕ್ಕಳು ಮೊದಲ ವಾಣಿಜ್ಯ ಚಾಲನಾ ಪರವಾನಗಿಯನ್ನು ಪಡೆದರು
    • ಮೈಸೂರು ಮತ್ತು ತುಮಕೂರಿನಲ್ಲಿ ತ್ಯಾಜ್ಯ ಆಯುವವರಿಗೆ ಗುರುತಿನ ಕಾರ್ಡುಗಳ ವಿತರಣೆ
    • ಬೆಂಗಳೂರಿನಲ್ಲಿ 396 ತ್ಯಾಜ್ಯ ಆಯುವವರಿಗೆ DWCC ಮೂಲಕ ನಿರೀಕ್ಷಿಸಬಹುದಾದ ಆದಾಯವನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಯಿತು
    • ಈ ವರ್ಷದಲ್ಲಿ ನಿಧನರಾದ ತ್ಯಾಜ್ಯ ಆಯುತ್ತಿದ್ದ ಜಯಮ್ಮನವರ ಹೆಸರಿನಲ್ಲಿ “ಜಯಮ್ಮ ಫ಼ೆಲೋಷಿಪ್ಪ”ನ್ನು ಆರಂಭಿಸಲಾಯಿತು. ತಮ್ಮ ನಗರಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಸಂಘಟಿಸಬಯಸುವವರಿಗೆ ಇದನ್ನು ನೀಡಲಾಗುವುದು;ನಮ್ಮ ಮೊದಲ ಫ಼ೆಲೋ ಲಕ್ನೋದವರಾಗಿದ್ದರು
    • ಹಸಿರು ದಳವು ದಕ್ಷತೆಯ ದೃಷ್ಟಿಯಿಂದ ಸೂಕ್ತವಾದ ಮತ್ತು ಕಲಾತ್ಮಕವಾಗಿ ಸುಂದರವಾದ DWCC ಮಾದರಿಯನ್ನು ರೂಪಿಸಿತು, ಇದು ತ್ಯಾಜ್ಯ ಆಯುವವರ ಕೆಲಸಕ್ಕಾಗಿ ಉತ್ತಮತರ ಪರಿಸರವನ್ನು ಕಲ್ಪಿಸುತ್ತದೆ. ಇದು (ಡೆನ್ಮಾರ್ಕ್ ಕಂಪನಿಯಾದ) ಸ್ವೀಪ್ ಸ್ಮಾರ್ಟ್ ಮತ್ತು DELL EMCನೊಂದಿದೆ ಸಹಯೋಗದ ಪಾಲುದಾರಿಕೆಯಾಗಿತ್ತು
    • ಕೇಂದ್ರದ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯಕ್ಕಾಗಿ ಎನ್ಐಯುಎ ಪರವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಂದ ಬಂದ 108 ಅಧಿಕಾರಿಗಳಿಗೆ ಹಸಿರು ದಳ ತರಬೇತಿಯನ್ನು ನೀಡಿತು.
    • NSKFDC ಮತ್ತು ವಿಜಯ ಬ್ಯಾಂಕುಗಳು ಮೊದಲ ಬಾರಿಗೆ ಕಾರ್ಯಚಾಲನೆ ಮಾಡುತ್ತಿರುವ ತ್ಯಾಜ್ಯ ಆಯುವವರಿಗೆ ಓವರ್ಡ್ರ್ಯಾಫ್ಟ್ ಸೌಕರ್ಯವನ್ನು ನೀಡಿದವು
    • ಹಸಿರು ದಳ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ರಾಜಮುಂಡ್ರಿ ಮತ್ತು ತ್ರಿಚಿ/ಕೊಯಂಬತ್ತೂರಿನಲ್ಲಿ ಕಛೇರಿಗಳನ್ನು ಸ್ಥಾಪಿಸಿತು.
    • ದಾವಣಗೆರೆ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಮೊದಲ ಎಂ ಆರ್ ಎಫ಼್
    • ಯುಎನ್ ಡಿಪಿಯ ಸಹಯೋಗ ಮತ್ತು ಬೆಂಬಲದೊಂದಿಗೆ ನಾವು ಸ್ವಚ್ಛತಾ ಕೇಂದ್ರ ಸಾಮಗ್ರಿ ಸಂಸ್ಕರಣಾ ಸೌಕರ್ಯವನ್ನು ಸ್ಥಾಪಿಸಿದೆವು.
    • ತ್ಯಾಜ್ಯ ಆಯುವವರಿಗೆ ಮತ್ತು ಇತರ ದಿನಗೂಲಿ ಕಾರ್ಮಿಕರಿಗೆ ಸಮಗ್ರವಾದ ಕೋವಿಡ್-19 ಪರಿಹಾರ ಪ್ರತಿಕ್ರಿಯೆ
    • ಬಿಬಿಎಂಪಿಯಿಂದ ತ್ಯಾಜ್ಯ ಆಯುವವರನ್ನು ಒಣತ್ಯಾಜ್ಯವನ್ನು ಸಂಗ್ರಹ ಮಾಡುವುದರಲ್ಲಿ ಏಕೀಕರಿಸುವ ಘನ ತ್ಯಾಜ್ಯ ನಿರ್ವಹಣೆ ಬೈಲಾ ಪ್ರಕಟಣೆ.
Kannada