ಉಪಕ್ರಮಗಳು

The Buguri Children’s Programme

ಕರ್ನಾಟಕದಲ್ಲಿ ಸುಮಾರು 1,00,000 ತ್ಯಾಜ್ಯ ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರಿದ್ದಾರೆ. ಅವರಲ್ಲಿ ಹೆಚ್ಚಿನವರು ಬೆಂಗಳೂರಿನಂಥ ಬೃಹತ್ ನಗರಲ್ಲಿದ್ದಾರೆ, ಚಾಮರಾಜನಗರ ಮತ್ತು ತುಮಕೂರಿನಂಥ ಚಿಕ್ಕ ನಗರಗಳಲ್ಲಿ 100-500 ತ್ಯಾಜ್ಯ ಆಯುವವರು ಇದ್ದಾರೆ. ಇವರಲ್ಲಿ ಗಣನೀಯ ಸಂಸ್ಥೆಯಲ್ಲಿರುವ ತ್ಯಾಜ್ಯ ಆಯುವವರು ಪರಿಶಿಷ್ಟ ಜಾತಿ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳು ಸೇರಿದ ಹಾಗೆ ಉಪೇಕ್ಷಿತ ಸಮುದಾಯದಿಂದ ಬಂದ ಮಹಿಳೆಯರು. ಅಧ್ಯಯನಗಳ ಪ್ರಕಾರ ಕಂಡುಬಂದಿರುವುದು ಎಂದರೆ: ಹೆಚ್ಚಿನ ತ್ಯಾಜ್ಯ ಆಯುವವರು ಹೆಚ್ಚು ವಯಸ್ಸಾದವರಲ್ಲ(18ರಿಂದ 40 ವರ್ಷದವರು), ಅನಕ್ಷರಸ್ಥರು ಮತ್ತು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು. ಆದ್ದರಿಂದ, ಅವರ ವರ್ಗ ಮತ್ತು ಜಾತಿಯ ಹಿನ್ನೆಲೆಯಿಂದಾಗಿ ಇವರು ಎರಡು ಪಟ್ಟು ಉಪೇಕ್ಷಿತರಾಗಿ ಉಳಿಯುತ್ತಾರೆ.

ಸವಾಲುಗಳು

’ರಿಸ್ಕಿನಲ್ಲಿದ್ದಾರೆ’ ಎನ್ನುವ ಮಕ್ಕಳಲ್ಲಿಯೇ ತ್ಯಾಜ್ಯ ಆಯುವವರ ಮಕ್ಕಳು ಅತ್ಯಂತ ಉಪೇಕ್ಷಿತರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಬಹಳ ಬೇಗನೇ ಶಾಲೆಗಳನ್ನು ಅರ್ಧದಲ್ಲಿಯೇ ಬಿಟ್ಟುಬಿಡುತ್ತಾರೆ, ಮತ್ತು ತಮ್ಮ ಪೋಷಕರ ತ್ಯಾಜ್ಯ ಆಯುವ ಕೆಲಸದಲ್ಲಿ ತೊಡಗಿಬಿಡುತ್ತಾರೆ. ಇದು ಅವರಿಗೆ ಬಡತನದ ವಿಷವರ್ತುಲದಲ್ಲಿ ಸಿಲುಕಿಸಿಬಿಡುವುದಲ್ಲದೇ ಪ್ರಾಣಾಪಾಯಕಾರಿ ರೋಗಗಳಿಗೆ ಅವರನ್ನು ಒಡ್ಡುತ್ತದೆ. ಅವರಲ್ಲಿಯೇ ಕೆಲವರು ಸುಮಾರು ಹದಿನೈದು ವರ್ಷ ಆಗುವವರೆಗೆ ಶಾಲೆಯಲ್ಲಿ ಉಳಿದವರು ಅದರ ನಂತರ ದೈಹಿಕ ಕೆಲಸಗಳಲ್ಲಿ ತೊಡಗುತ್ತಾರೆ. ಪೋಷಕರು ಬೆನ್ನು ಬಿದ್ದು ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುವಂತೆ ಮಾಡುವ ಮಕ್ಕಳ ಸಂಖ್ಯೆ ತೀರಾ ಕಡಿಮೆ.

ನಮ್ಮೆದುರು ಇರುವ ಬಹುದೊಡ್ಡ ಸವಾಲು ಎಂದರೆ, ಮಕ್ಕಳು ಏಳಿಗೆ ಹೊಂದಲು ಸುಸ್ಥಿರವಾದ ಮತ್ತು ಪೋಷಕವಾದ ಅವಕಾಶಗಳನ್ನು ಸೃಷ್ಟಿಸುವುದಾಗಿದೆ. ಮಕ್ಕಳ ಪರಿವರ್ತನೆ ಆರಂಭವಾಗುವುದು ಸ್ಥಿರತೆಯಿಂದ. ಸುರಕ್ಷಿತತೆಯನ್ನು ಒದಗಿಸಿದಾಗ ಅವರು ಅವರ ಸೃಜನಶೀಲತೆ ಅನಾವರಣಗೊಳ್ಳುತ್ತದೆ ಮತ್ತು ಅವರು ಕಲಿಯಲು ಉತ್ಸುಕರಾಗುತ್ತಾರೆ. ಇದರಿಂದ ಅವರು ಮುಂದೆ ಯಾವ ಉದ್ಯೋಗವನ್ನು ಮಾಡುತ್ತಾರೆ ಎನ್ನುವುದರ ಕುರಿತು ಅವರಿಗೆ ಆಯ್ಕೆಗಳು ಮೂಡುತ್ತವೆ.

ನಮ್ಮ ಕಾರ್ಯವಿಧಾನ

ಹಸಿರು ದಳದ ಬುಗುರಿ ಕಾರ್ಯಕ್ರಮಗಳು ತ್ಯಾಜ್ಯ ಆಯುವವರ ಮಕ್ಕಳ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತವೆ; ಮಕ್ಕಳು ಶಾಲೆಯಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವುದು, ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅವರ ಸರ್ವಾಂಗೀಣವಾಗಿ ಬೆಳೆಯಲು ಆಗತ್ಯವಾದ ಪೋಷಕ ಪರಿಸರವನ್ನು ಒದಗಿಸುವುದು ಈ ಕಾರ್ಯಕ್ರಮಗಳ ವೈಖರಿಯಾಗಿದೆ. ಬುಗುರಿ ಕಾರ್ಯಕ್ರಮವು ಕರ್ನಾಟಕಾದ್ಯಂತ, ತನ್ನ ಗ್ರಂಥಾಲಯಗಳ ಮತ್ತು ಶೈಕ್ಷಣಿಕ ಬೆಂಬಲದ ಕಾರ್ಯಕ್ರಮಗಳ ಮೂಲಕ ತ್ಯಾಜ್ಯ ಆಯುವವರ ಮತ್ತು ಅನೌಪಚಾರಿಕ ತ್ಯಾಜ್ಯ ಕಾರ್ಯಕರ್ತರ 1,000ಕ್ಕೂ ಹೆಚ್ಚು ಮಕ್ಕಳನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಂಡಿದೆ.

ಪ್ರಕರಣ ಅಧ್ಯಯನ

ವಿದ್ಯಾರ್ಥಿ ವೇತನಗಳು ಮತ್ತು ಸಾಲಗಳು

ತ್ಯಾಜ್ಯ ಆಯುವವರ ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಅನುಕೂಲವಾಗುವಂತೆ ಹಸಿರು ದಳವು ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ (ಸರಕಾರ ಮತ್ತು ಖಾಸಗಿ ನಿಧಿಗಳ) ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಹಾಕುವುದನ್ನು ಸುಗಮಗೊಳಿಸುತ್ತದೆ. ಕಾಲೇಜು ಓದುವ ವಿದ್ಯಾರ್ಥಿಗಳಿಗಾಗಿ ಕಡಿಮೆ ಬಡ್ಡಿದರ ಸಾಲಗಳನ್ನು ಪಡೆಯುವಲ್ಲಿಯೂ ಹಸಿರು ದಳ ಸಹಾಯ ಮಾಡುತ್ತದೆ.

ಹಾಸ್ಟಲ್ಲಿಗೆ ಸೇರಿಸುವುದು

ತಕ್ಷಣ ಪುನರ್ವಸತಿ ಅಗತ್ಯವಿರುವ ಮಕ್ಕಳನ್ನು ಗುರುತಿಸುವುದು. ಹಾಸ್ಟಲ್ ಕಾರ್ಯಕ್ರಮದಲ್ಲಿರುವ ತಂಡದವರು ಮಕ್ಕಳ ಪೋಷಕರೊಂದಿಗೆ ಕೆಲಸ ಮಾಡಿ, ಸಂಕಷ್ಟದಲ್ಲಿರುವ ಮಕ್ಕಳಿಗೆ ಸುರಕ್ಷಿತವಾಗಿ ಬದುಕುವ ಪರಿಸರವನ್ನು ಒದಗಿಸಿ ಅವರು ತಮ್ಮ ಶಿಕ್ಷಣವನ್ನು ಮುಂದುವರಿಯಲು ನೆರವಾಗುತ್ತದೆ. ನಮ್ಮ ಕ್ಷೇತ್ರ ಸಿಬ್ಬಂದಿ ನಿಯತವಾಗಿ ಅವರಿರುವ ಹಾಸ್ಟಲ್ಲುಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದು, ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿರುತ್ತಾರೆ.

ಸಮುದಾಯ ಗ್ರಂಥಾಲಯಗಳು

ಬೆಂಗಳೂರು, ಮೈಸೂರು ಮತ್ತು ತುಮಕೂರುಗಳಲ್ಲಿ ಸಮುದಾಯ ಗ್ರಂಥಾಲಯಗಳನ್ನು ನಡೆಸಲಾಗುತ್ತಿದೆ. 500ಕ್ಕೂ ಹೆಚ್ಚು ಮಕ್ಕಳು ಇಲ್ಲಿರುವ 3,000ಕ್ಕೂ ಹೆಚ್ಚು ಪುಸ್ತಕಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಮಕ್ಕಳು ಈ ಗ್ರಂಥಾಲಯಗಳಿಗೆ ಶಾಲೆ ಮುಗಿದ ನಂತರ ಬರುತ್ತಾರೆ; ಪುಸ್ತಕಗಳನ್ನು ಓದುವುದಲ್ಲದೇ ಇಲ್ಲಿ ಸಾಹಿತ್ಯವನ್ನು ಸಜೀವಗೊಳಿಸುವುದು, ಕಥೆಗಳನ್ನು ಹೇಳುವುದು, ಓದಿದ ಪುಸ್ತಕಗಳ ಕುರಿತು ಚರ್ಚೆ ಮತ್ತು ಭಾಷಣ ಇತ್ಯಾದಿ ಕಾರ್ಯಚಟುವಟಿಕೆಗಳು ನಡೆಯುತ್ತವೆ.

ಸಂಚಾರಿ ಗ್ರಂಥಾಲಯ

ಒಂದು ವಾಸ್ತವವಾದ ಗ್ರಂಥಾಲಯವನ್ನು ನಡೆಸುವುದಕ್ಕೂ ಕಷ್ಟವಿರುವ ದುರ್ಗಮ ಸ್ಥಳಗಳಿಗೂ ಪುಸ್ತಕಗಳನ್ನು ತಲುಪಿಸುವ ಕೆಲಸ. ನಮ್ಮ ಗ್ರಂಥಾಲಯ ಶಿಕ್ಷಕರು ಕೆಲವು ಗುರುತಿಸಲಾದ ಸಮುದಾಯಗಳಲ್ಲಿ ತಾತ್ಕಾಲಿಕ ಗ್ರಂಥಾಲಯಗಳನ್ನು ತೆರೆದು ಹಲವು ಬಗೆಯ ಮಕ್ಕಳ ಪುಸ್ತಕಗಳು ಅವರಿಗೆ ಲಭ್ಯವಾಗುವ ಹಾಗೆ ಮಾಡುತ್ತಾರೆ, ಮತ್ತು ಹಲವು ಬಗೆಯ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ಸೃಜನಶೀಲ ಕಲಾತ್ಮಕ ಅಭಿವ್ಯಕ್ತಿ ಕಾರ್ಯಕ್ರಮ

ವಿಶಿಷ್ಟವಾಗಿ ಬನಶಂಕರಿ ಸಮುದಾಯದಲ್ಲಿನ ಹದಿಹರೆಯದವರಿಗಾಗಿ ರೂಪಿಸಿದ ಕಾರ್ಯಕ್ರಮ, ಬೆಂಗಳೂರಿನಲ್ಲಿ, ಮಾದಕ ವಸ್ತುಗಳ ಚಟ, ಲಿಂಗ ಸೂಕ್ಶ್ಮತೆ ಮತ್ತು ಬಾಲವಿವಾಹದ ಸಮಸ್ಯೆಗಳ ಕುರಿತು ಹದಿಹರೆಯದವರೊಂದಿಗೆ ಸಂವಾದಕ್ಕೆ ಇಳಿಯಲು ಕಲಾ ಮಾಧ್ಯಮಗಳನ್ನು ಬಳಸಲಾಗುತ್ತದೆ.

ವಾರ್ಷಿಕ ಕಾರ್ಯಶಿಬಿರ

ಇದು, ಬೆಂಗಳೂರು, ಮೈಸೂರು ಮತ್ತು ತುಮಕೂರುಗಳಲ್ಲಿ, ಬೇಸಿಗೆಯಲ್ಲಿ ಪ್ರತಿವರ್ಷ ನಡೆಸಲಾಗುವ ಶಿಬಿರ. 600ಕ್ಕೂ ಹೆಚ್ಚು ಮಕ್ಕಳ ಈ ಶಿಬಿರದಲ್ಲಿ ಭಾಗವಹಿಸಿ ಮೋಜಿನೊಂದಿಗೆ ಕಲಿಕೆಯ ಪ್ರಯೋಜನವನ್ನೂ ಪಡೆಯುತ್ತಾರೆ. ಕಾರ್ಯಶಿಬಿರದ ಕೊನೆಯಲ್ಲಿ ಎಲ್ಲ ಮಕ್ಕಳು, ’ನಾವು ಶಾಲೆಯನ್ನು ಬಿಡುವುದಿಲ್ಲ, ಶಿಕ್ಷಣವನ್ನು ಮುಂದುವರಿಸುತ್ತೇವೆ, ಶಾಲೆಯನ್ನು ಬಿಡುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಹಸಿರು ದಳದ ತಂಡದೊಂದಿಗೆ ಕೆಲಸ ಮಾಡುತ್ತೇವ” ಎಂದು ಶಪಥ ಮಾಡುತ್ತಾರೆ.

“ಗಟ್ಟಿಯಾಗಿ ಓದಿ” ದಿನಾಚರಣೆ

ಇದು ತ್ಯಾಜ್ಯ ಆಯುವವರ ಮಕ್ಕಳಲ್ಲಿ ಸಾಕ್ಷರತೆ ಮತ್ತು ಅಕ್ಷರ ಸಂಸ್ಕೃತಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಆರಂಭಿಸಲಾದ ಕಾರ್ಯಕ್ರಮ. ಪ್ರತಿ ವರ್ಷ ಫ಼ೆಬ್ರವರಿಯಲ್ಲಿ ಬರುವ ’”ವರ್ಲ್ಡ್ ರೀಡ್ ಅಲೌಡ್ ಡೆ” ಆಚರಣೆಯ ಸುತ್ತಮುತ್ತ ಗ್ರಂಥಾಲಯ ಪಾಲಕರು, ಪಾಲುದಾರ ಸಂಸ್ಥೆಗಳು ಮತ್ತು ಸ್ವಯಂಸೇವಕರು, ಶಾಲೆ, ಸಮುದಾಯ, ಗ್ರಂಥಾಲಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, 2,500ಕ್ಕೂ ಹೆಚ್ಚು ಮಕ್ಕಳೆದುರು ಮಕ್ಕಳ ಕವನ, ಕಥೆ ಪುಸ್ತಕಗಳನ್ನು ಗಟ್ಟಿಯಾಗಿ ಓದುತ್ತಾರೆ. ತ್ಯಾಜ್ಯ ಆಯುವವರ ಮಕ್ಕಳು ಇತರ ಸಮುದಾಯಗಳಿಂದ ಬಂದ ಮಕ್ಕಳ ಜೊತೆ ಒಡನಾಡಿ, ಹೊಸ ಸ್ನೇಹ ಸೌಹಾರ್ದವನ್ನು ಗಳಿಸಿಕೊಳ್ಳಲು ಮತ್ತು ಒಟ್ಟಿಗೇ ಕಲಿಯಲು ಇಂಥ ಕಾರ್ಯಶಿಬಿರಗಳು ಪ್ರೇರಕವಾಗಿವೆ.

Kannada