ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಷನ್ (ಐಎಲ್ಒ) ಸಾಮಾಜಿಕ ಭದ್ರತೆಯನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ: “ಸಮಾಜವು ಸೂಕ್ತವಾದ ಸಂಸ್ಥೆಗಳ ಮೂಲಕ, ವಿಪತ್ತುಗಳನ್ನು ಎದುರಿಸಬೇಕಾಗಿ ಬರುವ ತನ್ನ ಸದಸ್ಯರಿಗೆ ಕೊಡಮಾಡುವ ಭದ್ರತೆ. ಈ ವಿಪತ್ತುಗಳ ಮೂಲಭೂತವಾಗಿ ಆಕಸ್ಮಿಕವಾಗಿದ್ದು, ಅವುಗಳನ್ನು ಆ ಸದಸ್ಯರು ಸ್ವಂತ ಸಾಧನ, ಸಾಮರ್ಥದಿಂದ ವ್ಯಕ್ತಿಗತ ಅಥವಾ ಅಂಥ ವ್ಯಕ್ತಿಗಳ ಖಾಸಗೀ ಸಮೂಹದಿಂದ ಪರಿಹರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.”
ಬಡವರು ಮತ್ತು ಜಾತಿ ವ್ಯವಸ್ಥೆಯಿಂದಾಗಿ ಪರಂಪರಾಗತವಾಗಿ ತಾರತಮ್ಯಕ್ಕೆ ಒಳಗಾಗಿರುವ ಜನರಿಗೆ ಸಮಾಜದಲ್ಲಿ ಬೆಳೆಯಲು ಸಮಾನವಾದ ಅವಕಾಶವನ್ನು ಕಲ್ಪಿಸಿ ಸಾಮಾಜಿಕ ಭದ್ರತೆಯನ್ನು ನೀಡುವುದು ಭಾರತ ಕಲ್ಯಾಣ ರಾಷ್ಟ್ರದ ಬದ್ಧತೆಗಳಲ್ಲಿ ಒಂದಾಗಿದೆ.
ಹಸಿರು ದಳ ಸಾಮಾಜಿಕ ಭದ್ರತೆಯನ್ನು, ಬದುಕಲು ಸೂಕ್ತವಾದ ದುಡಿಮೆ ಇಲ್ಲದವರಿಗೆ ಸರಕಾರವು ಕೊಡುವ ಭರವಸೆ ಮತ್ತು ಬೆಂಬಲವೆಂದು ಪರಿಭಾವಿಸುತ್ತದೆ.
ಅಂಬಿಕಾ: ಹಸಿರು ದಳದಿಂದ ತ್ಯಾಜ್ಯ
ಸಾಂಪ್ರದಾಯಿಕವಾಗಿ, ತ್ಯಾಜ್ಯ ಆಯುವವರು ಅಧಿಕೃತವಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಹೊರಗಿದ್ದಾರೆ, ಸರಕಾರದಿಂದ ಗುರುತಿಸಲ್ಪಡೆದೆಯೂ ತ್ಯಾಜ್ಯ ನಿರ್ವಹಣೆಯಲ್ಲಿ ಅಗೋಚರವಾಗಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ; ಹೀಗಾಗಿ, ತ್ಯಾಜ್ಯ ಆಯುವವರು ಸರಕಾರದ ಯೋಜನೆಗಳಿಂದ ಸಿಗುವ ಯಾವುದೇ ಲಾಭದಿಂದ ವಂಚಿತರಾಗಿದ್ದಾರೆ.
ತ್ಯಾಜ್ಯ ಆಯುವವರಿಗೆ ಬಡವರಿಗಾಗಿ ಸರಕಾರದಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಯ ಕುರಿತು ತಿಳಿವಳಿಕೆ ಇರುವುದಿಲ್ಲ, ಹೊಸದಾಗಿ ಘೋಷಣೆಯಾಗುವ ಅಂಥ ಯೋಜನೆಗಳ ಸುದ್ದಿ ಇವರವರೆಗೆ ತಲುಪುವುದಿಲ್ಲ. ರಸ್ತೆಬದಿಯಲ್ಲಿ, ಬಾಡಿಗೆ ನೆಲದಲ್ಲಿ ಅಥವಾ ಸ್ಲಮ್ಮುಗಳಲ್ಲಿ ಬದುಕುವ ಹೆಚ್ಚಿನವರಿಗೆ ತಮ್ಮ ನಿವಾಸದ ಪುರಾವೆಯನ್ನು ಒದಗಿಸುವುದು ಬಹುದೊಡ್ಡ ಸವಾಲಾಗಿದೆ; ಆದರೆ ಒಬ್ಬ ವ್ಯಕ್ತಿಯನ್ನು ಗುರುತಿಸಲು ಮತ್ತು ಆ ಪ್ರಕಾರ ಸರಕಾರದ ವತಿಯಿಂದ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ನಿವಾಸದ ಪುರಾವೆ ಅನಿವಾರ್ಯವಾಗಿದೆ.
ತ್ಯಾಜ್ಯ ಆಯುವವರು ಬಳಸಿಕೊಳ್ಳಬಹುದಾದ ಹಲವಾರು ಯೋಜನೆಗಳಿಗೆ ಉಪೇಕ್ಷಿತ ಸಮುದಾಯಗಳನ್ನು ಗುರುತಿಸುವ ಜಾತಿ ಪ್ರಮಾಣಪತ್ರಗಳು ಅನಿವಾರ್ಯ. ಇಂಥ ಒಂದು ಜಾತಿ ಪ್ರಮಾಣಪತ್ರವನ್ನು ಪಡೆದುಕೊಳ್ಳಲು, ತ್ಯಾಜ್ಯ ಆಯುವ ವ್ಯಕ್ತಿಯ ಬಳಿ, ಅವರ ಜಾತಿಯ ಉಲ್ಲೇಖವಿರುವ ಶಾಲಾ ಪ್ರಮಾಣ ಪತ್ರವಿರಬೇಕು; ಆದರೆ ನಾವು ಗಮನಿಸುತ್ತಿರುವ ಸಮುದಾಯದಲ್ಲಿ ಹಲವರು ಶಾಲೆಯ ಮುಖವನ್ನೇ ನೋಡಿಲ್ಲ. ಮಕ್ಕಳ ಶಾಲಾ ಪ್ರಮಾಣಪತ್ರಗಳು ಅವರ ತಂದೆಗೆ ಜಾತಿ ಪ್ರಮಾಣಪತ್ರವನ್ನು ಪಡೆಯುವಲ್ಲಿ ಸಹಾಯಕವಾಗುತ್ತವೆ. ತಾಯಿಯು ತನ್ನ ತಂದೆ ಅಥವಾ ಒಡಹುಟ್ಟಿದವರ ಮೂಲಕ ತನ್ನ ಜಾತಿಯನ್ನು ಖಚಿತಪಡಿಸುವುದಾದರೆ ಜಾತಿ ಪ್ರಮಾಣ ಪತ್ರ ದೊರೆಯುತ್ತದೆ. ಪಿತೃಪ್ರಧಾನ ಸಮಾಜದಲ್ಲಿ ಒಬ್ಬ ಮಹಿಳೆಗಂತೂ ಇದು ಬಹುದೊಡ್ಡ ಸವಾಲಾಗಿದೆ.
ಕರ್ನಾಟಕದಲ್ಲಿ ಕಾರ್ಯದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಹೆಚ್ಚಿನ ಸರಕಾರಿ ಯೋಜನೆಗಳನ್ನು ಡಿಜಿಟಲೈಸ್ ಮಾಡುವ ಪ್ರಯತ್ನ ನಡೆದಿದೆ. “ಸಕಾಲ” ಎಂಬ ಒಂದು ಸಾಧನದ ಮೂಲಕ ಆಡಳಿತವನ್ನು ಸುಗಮಗೊಳಿಸುವುದು, ಕಲ್ಯಾಣ ಯೋಜನೆಗಳಿಗಾಗಿ ಮೀಸಲಿಟ್ಟಿರುವ ಹಣ ಸೋರಿಕೆಯಾಗಬಾರದು ಎಂಬುದು ಇದರ ಉದ್ದೇಶ. ಆದರೂ, ತ್ಯಾಜ್ಯ ಆಯುವವರ ಮಟ್ಟಿಗೆ ಇಲ್ಲೊಂದು ಡಿಜಿಟಲ್ ಕಂದಕವಿದೆ, ಆನ್ ಲೈನ್ ಮೂಲಕ ವ್ಯವಹರಿಸುವ ಅಭ್ಯಾಸ ಅವರಿಗಿಲ್ಲ, ಇದಕ್ಕಾಗಿ ಏನೆಲ್ಲಾ ದಾಖಲೆಗಳು ಬೇಕು ಎಂಬುದು ಅವರಿಗೆ ಗೊತ್ತಿಲ್ಲ, ಹೀಗಾಗಿ ಈ ಯೋಜನೆಯ ಪ್ರಯೋಜನ ಪಡೆಯುವುದರಲ್ಲಿ ಹಿಂಜರಿಯುವುದೇ ಹೆಚ್ಚು.
ಉದಾಹರಣೆಗೆ, 2017ರಲ್ಲಿ, ಶಿಕ್ಷಣಕ್ಕೆ ಸಂಬಂಧ ಪಟ್ಟ ಯೋಜನೆಗಳಿಗೆ ಅರ್ಜಿಯನ್ನು ಆನ್ ಲೈನ್ ಕಳಿಸಬೇಕು ಎಂದು ಮಾಡಿದ ನಂತರ ತ್ಯಾಜ್ಯ ಆಯುವವರ ಅನೇಕ ಜನ ಮಕ್ಕಳು ಇಂಥ ಶೈಕ್ಷಣಿಕ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುವುದು ಕಡಿಮೆಯಾಗಿದೆ ಎಂದು ಕರ್ನಾಟಕ ಸರಕಾರವು ವರದಿ ಮಾಡಿದೆ.
ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರ ಬಳಿ ಏನಾದರೂ ದಾಖಲೆಗಳಿದ್ದರೂ ಅವು ಅವರ ಹುಟ್ಟೂರುಗಳಲ್ಲಿ ಇರುತ್ತವೆ, ಈಗ ಅವರು ಕೆಲಸ ಮಾಡುತ್ತಿರುವ ರಾಜ್ಯದಲ್ಲಿ ಅವರಿಗೆ ಸಾಮಾಜಿಕ ಭದ್ರತೆಯಿಲ್ಲ.ಈ ಸಮಯದಲ್ಲಿ ಕಲ್ಯಾಣ ಯೋಜನೆಗಳ ಪೋರ್ಟಬಿಲಿಟಿ ಸಾಧ್ಯವಿಲ್ಲ. ಹೀಗಾಗಿ, ಈಗ ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಆಹಾರದ ಭದ್ರತೆ ಅಥವ ಇತರ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯಲು ಅವರಿಗೆ ಆಗುತ್ತಿಲ್ಲ.
ಹಸಿರು ದಳ, ತಾನು ಆರಂಭವಾದಾಗಿನಿಂದ ತ್ಯಾಜ್ಯ ಆಯುವವರು ಮತ್ತು ಅವರ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಕಾರ್ಯದಲ್ಲಿ ತೊಡಗಿದೆ.
ಹಸಿರು ದಳ ಯಾವುದೇ ನಗರದಲ್ಲಿ ಕೆಲಸ ಮಾಡಲಿ, ನಮ್ಮ ಮೊದಲ ಹೆಜ್ಜೆ ಎಂದರೆ ತ್ಯಾಜ್ಯ ಆಯುವವರಿಗೆ ಗುರುತಿನ ಚೀಟಿಯನ್ನು ನೀಡುವ ಬೇಡಿಕೆಯೊಂದಿಗೆ ಸ್ಥಳೀಯ ಸರಕಾರವನ್ನು ಭೇಟಿಯಾಗುವುದು.
ನಾವು ಸರಕಾರದ ಮಾನ್ಯತೆ ಇರುವ ಔದ್ಯೋಗಿಕ ಗುರುತು ಕಾರ್ಡುಗಳಿಂದ ಅರಂಭಿಸುವುದರಿಂದ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯಲ್ಲಿ ಯಾವುದೇ ನಗರದಲ್ಲಿ ತ್ಯಾಜ್ಯ ಆಯುವವರ ಕೊಡುಗೆ ಏನು ಎಂಬುದರ ಕಡೆಗೆ ಅವರ ಗಮನ ಸೆಳೆದಂತೆಯೂ ಆಗುತ್ತದೆ. ಅವರ ಸೇವೆಯಿಂದ ನಗರದ ಸರಕಾರಕ್ಕೆ ಎಷ್ಟೊಂದು ಹಣ ಉಳಿಯುತ್ತದೆ ಮತ್ತು ಪುನರುತ್ಪಾದನೆ ಮಾಡುವ ಮೂಲಕ ವಾಯುಗುಣ ಬದಲಾವಣೆಯ ಅನಾಹುತವನ್ನು ಕಡಿಮೆ ಮಾಡುವತ್ತ ಸಹಾಯಕವಾಗುತ್ತದೆ ಎಂಬುದನ್ನು ಅರ್ಥ ಮಾಡಿಸುವುದೂ ನಮ್ಮ ಉದ್ದೇಶವಾಗಿರುತ್ತದೆ.
ಬಿಬಿಎಂಪಿ ನೀಡಿರುವ ಔದ್ಯೋಗಿಕ ಗುರುತು ಕಾರ್ಡುಗಳ ಮೇಲೆ ನಗರದ ಲಾಂಛನ ಮತ್ತು ಆಯುಕ್ತರ ಸಹಿಯ ಜೊತೆಯಲ್ಲಿ ಹಿಂಬದಿಯಲ್ಲಿ ಹಸಿರು ದಳದ ಲಾಂಛನವಿರುತ್ತದೆ. ಇದರ ನಂತರ, ಹಸಿರು ದಳ, ಇತರ ಸಮಾನಮನಸ್ಕ ಸಂಸ್ಥೆಗಳೊಂದಿಗೆ ಶ್ರಮಿಸಿ ಇದನ್ನು ರಾಷ್ಟ್ರೀಯ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು, 2016ರಲ್ಲಿ ಒಂದು ನಿಬಂಧನೆಯಾಗುವ ಹಾಗೆ ಮಾಡಿದೆ. ಔದ್ಯೋಗಿಕ ಗುರುತು ಕಾರ್ಡುಗಳು ತ್ಯಾಜ್ಯ ಆಯುವವರಿಗೆ ಸಾಮಾಜಿಕ ಭದ್ರತೆಯ ಅಧಿಕಾರಗಳನ್ನು ಬಳಸಿಕೊಳ್ಳುವಲ್ಲಿ ಮತ್ತು ಅದರಿಂದ ಸಾಮಗ್ರಿಯ ಲಾಭವನ್ನು ಪಡೆಯುವುದಕ್ಕೆ ಬಾಗಿಲು ತೆರೆಯುತ್ತವೆ.
ಎರಡನೆ ಹಂತ ಎಂದರೆ ತ್ಯಾಜ್ಯ ಆಯುವವರಿಗೆ ನಿವಾಸ/ಮನೆ ವಿಳಾಸದ ಪುರಾವೆಯನ್ನು ಸ್ಥಾಪಿಸಲು ಸಹಾಯ ಮಾಡುವುದು.
ಮೂರನೆ ಹಂತ, ರಾಜ್ಯದ ಇತರ ಎಲ್ಲ ಬಡವರಿಗೆ ಲಭ್ಯವಿರುವ ವಿವಿಧ ಯೋಜನೆಗಳನ್ನು ಗುರುತಿಸಿ, ಅವುಗಳಿಗೆ ಅರ್ಜಿಯನ್ನು ಸಲ್ಲಿಸುವಂತೆ ಮಾಡುವ ಮೂಲಕ ತ್ಯಾಜ್ಯಾ ಆಯುವವರಿಗೆ ಅವುಗಳ ಲಾಭ ಪಡೆಯಲು ನೆರವಾಗಿದ್ದು. ಪ್ರತಿಯೊಬ್ಬರಿಗೂ ಎಲ್ಲ ಯೋಜನೆಗಳ ಲಾಭ ದೊರೆಯುವುದಿಲ್ಲ. ಯೋಜನೆಗಳು ಕೆಲವು ಮಾನದಂಡಗಳನ್ನು ಆಧರಿಸಿ ಇರುತ್ತವೆ- ಅವು ವಯಸ್ಸು, ಶಾರೀರಿಕ ಅಸಾಮರ್ಥ್ಯ, ಲಿಂಗ, ಜಾತಿ, ಆದಾಯ ಅಥವಾ ವೈಧವ್ಯ ಇತ್ಯಾದಿಗಳನ್ನು ಅವಲಂಬಿಸಿ ಇರುತ್ತವೆ, ಮತ್ತು ಪ್ರತಿಯೊಂದು ಯೋಜನೆಗೂ ಯಾರೂ ಎಲ್ಲ ಮಾನದಂಡಗಳನ್ನು ಪೂರೈಸಲು ಸಾಧ್ಯವಿಲ್ಲ. ಆದಾಗ್ಯೂ ಒಬ್ಬ ತ್ಯಾಜ್ಯ ಆಯುವ ವ್ಯಕ್ತಿ ಅಥವಾ ಅವರ ಕುಟುಂಬದ ಸದಸ್ಯರು ಸರಾಸರಿ, ಕನಿಷ್ಟ 4-8 ಯೋಜನೆಗಳ ಲಾಭ ಪಡೆಯಬಹುದು.
ತ್ಯಾಜ್ಯ ಆಯುವವರಿಗೆ ವಿಶಿಷ್ಟವಾಗಿ ಸಂಬಂಧಿಸಿದ ಯೋಜನೆಗಳು ಎಂದರೆ, ವರ್ಷಕ್ಕೆ ರೂ.3,500 ನೀಡುವ ಶೈಕ್ಷಣಿಕ ವಿದ್ಯಾರ್ಥಿವೇತನ. NSKFDC (ನ್ಯಾಷನಲ್ ಸಫಾಯಿ ಕರ್ಮಚಾರಿ ಡೆವಲೆಪ್ಮೆಂಟ್ ಕಾರ್ಪೊರೇಷನ್-ನ್ಯಾಷನಲ್ ಸ್ಯಾನಿಟೇಷನ್ ವರ್ಕರ್ಸ್ ಕಮಿಷನ್) ತ್ಯಾಜ್ಯ ಆಯುವವರಿಗೆ ಮತ್ತು ಅವರ ಮಕ್ಕಳಿಗೆ ವಿಶೇಷವಾದ ತರಬೇತಿ, ಶೈಕ್ಷಣಿಕ ಮತ್ತು ಔದ್ಯಮಿಕ ಸಾಲಗಳನ್ನು ನೀಡುತ್ತದೆ.
ತ್ಯಾಜ್ಯ ಆಯುವವರ ಮಕ್ಕಳಿಗೆ ತರಬೇತಿ ಮತ್ತು ತ್ಯಾಜ್ಯ ವಲಯದಲ್ಲಿಯೇ ವೃತ್ತಿಪರ ಕೆಲಸಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ತ್ಯಾಜ್ಯ ಆಯುವವರ ಕೌಶಲ ವೃದ್ಧಿ ತರಬೇತಿಗಳನ್ನು ನಿಯತವಾಗಿ ಹಸಿರು ದಳವೇ ನೇರವಾಗಿ ಅಥವಾ ಇತರ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸುತ್ತದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸಾಮಾಜಿಕ ಭದ್ರತೆಯ ನೀತಿಯ ನಿಟ್ಟಿನಲ್ಲಿ ಹಸಿರು ದಳ ರಾಷ್ಟ್ರ ಮಟ್ಟದಲ್ಲಿ ಅಲಯನ್ಸ್ ಆಫ್ ಇಂಡಿಯನ್ ವೇಸ್ಟ್ ಪಿಕರ್ಸ್ ಮತ್ತು ರಾಜ್ಯ ಮಟ್ಟದಲ್ಲಿ ಹಲವು ಸಂಘಟನೆಗಳ ಜೊತೆ ಕೆಲಸ ಮಾಡುತ್ತದೆ.
ಕೋವಿಡ್-19ನಂಥ ವಿಶೇಷ ಸಂದರ್ಭದಲ್ಲಿ ಬಿಕ್ಕಟ್ಟಿನಲ್ಲಿರುವ ಸಮುದಾಯಕ್ಕೆ ಬೆಂಬಲವನ್ನು ನೀಡಲು ಪರಿಹಾರ ಚಟುವಟಿಕೆಗಳನ್ನೂ ನಡೆಸಲಾಯಿತು.